×
Ad

ದಾವಣಗೆರೆ: ಮದ್ಯ, ಮಾದಕ ವಸ್ತುಗಳ ದುಷ್ಪರಿಣಾಮಗಳ ಜನಜಾಗೃತಿ ಕಾರ್ಯಕ್ರಮ

Update: 2018-02-21 22:39 IST

ದಾವಣಗೆರೆ,ಫೆ.21: ಆರೋಗ್ಯಪೂರ್ಣ ಸಮಾಜ ನಿರ್ಮಾಣ ದೊಡ್ಡ ಸವಾಲಾಗಿದೆ ಎಂದು ಚಿತ್ರದುರ್ಗ ಶ್ರೀ ಮುರುಘಾಮಠದ ಶಿವಮೂರ್ತಿ ಮುರುಘಾಶರಣರು ಅಭಿಪ್ರಾಯಪಟ್ಟರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಜಿಲ್ಲಾಡಳಿತ ದಾವಣಗೆರೆ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ), ತಿಪಟೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ), ದಾವಣಗೆರೆ ಇವರ ಸಹಯೋಗದಲ್ಲಿ ಇಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸರ್ಕಾರ, ಸಂಘ-ಸಂಸ್ಥೆ ಎಲ್ಲರ ಮುಂದಿರುವ ದೊಡ್ಡ ಸವಾಲು. ಆರೋಗ್ಯಪೂರ್ಣ ಸಮಾಜ ರಚನೆಯಾಗಿದ್ದು, ಯಾವುದರಿಂದ ಆರೋಗ್ಯ ಚೆನ್ನಾಗಿರಲು ಸಾಧ್ಯವೆಂಬ ಬಗ್ಗೆ ಗಂಭೀರ ಚಿಂತನೆ ನಡೆಸಲುವ ಕಾಲ ಇದಾಗಿದೆ. ಬಸವಣ್ಣ, ಬುದ್ಧ, ಗಾಂಧೀಜಿ, ಅಂಬೇಡ್ಕರ್, ಮಹಾವೀರ ಸೇರಿದಂತೆ ಎಲ್ಲ ಸಂತರ ಮಹತ್ವದ ಗುರಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವುದಾಗಿತ್ತು. ವ್ಯಸನರಹಿತ ಸಮಾಜ ಎಲ್ಲರ ಆಶಯ. ಮದ್ಯ ಸಮಾಜದ ದೊಡ್ಡ ಪಿಡುಗು. ಇದರ ವಿರುದ್ಧ ಹೋರಾಟ ಸಾಗಬೇಕಿದೆ. ಸಾಮಾನ್ಯವಾಗಿ ಪುರುಷರೇ ಹೆಚ್ಚಾಗಿ ವ್ಯಸನಿಗಳಾಗಿರುತ್ತಾರೆ. ಇಂತಹ ಮಾದಕ ಮತ್ತು ಮದ್ಯ ಸೇವನೆಯ ವ್ಯಸನದ ಕುರಿತು ಜಾಗೃತಿ ಮೂಡಿಸಲು ಹೊರಟಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮಾದಕ ವ್ಯಸನಗಳ ದುಷ್ಪರಿಣಾಮದ ಬಗ್ಗೆ ಮೊದಲು ಅಧ್ಯಯನ ಮಾಡಿ ದುಶ್ಚಟಕ್ಕೆ ದಾಸರಾಗಿರುವರಲ್ಲಿ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ, ಮನವೊಲಿಸಿ ವ್ಯಸನ ಮುಕ್ತಗೊಳಿಸಬೇಕೆಂದರು.

ಜಿಪಂ ಅಧ್ಯಕ್ಷೆ ಮಂಜುಳಾ ಟಿ ವಿ ಮಾತನಾಡಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದ ಮನೆಮನೆಗೂ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸುವ ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದು, ಮಾದಕ ವಸ್ತುಗಳ ಕುರಿತು ಅರಿವು ಮೂಡಿಸುವ ಕೆಲಸದಂತಹ ಜವಾಬ್ದಾರಿಯನ್ನು ಹೊತ್ತಿರುವುದು ಶ್ಲಾಘನೀಯ ಎಂದರು.

ಮಹಾನಗರಪಾಲಿಕೆ ಮಹಾಪೌರರಾದ ಅನಿತಾಬಾಯಿ ಮಾಲತೇಶ್, ಜಿ ಪಂ ಸದಸ್ಯ ತೇಜಸ್ವಿ ಪಟೇಲ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ ಮೀನಾಕ್ಷಿ ಮಾತನಾಡಿದರು.

ಗೀತಾ ಸ್ವಾಗತಿಸಿ, ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ್ ಕೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News