ದಾವಣಗೆರೆ: ಅಂಚೆ ಪಾಸ್‍ಪೋರ್ಟ್ ಸೇವಾ ಕೇಂದ್ರ ಉದ್ಘಾಟನೆ
ದಾವಣಗೆರೆ,ಫೆ.21: ನಗರದಲ್ಲಿ ಅಂಚೆ ಪಾಸ್‍ಪೋರ್ಟ್ ಸೇವಾಕೇಂದ್ರ ಪ್ರಾರಂಭದಿಂದ ಸ್ಮಾರ್ಟ್ ಸಿಟಿಗೆ ಮತ್ತೊಂದು ಗರಿ ಮೂಡಿದಂತಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ನೂತನವಾಗಿ ಪ್ರಾರಂಭಿಸಲಾಗುತ್ತಿರುವ ಅಂಚೆ ಪಾಸ್‍ಪೋರ್ಟ್ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯು ಪ್ರಮುಖ ವಿದ್ಯಾ ಕೇಂದ್ರ ಮತ್ತು ವಾಣಿಜ್ಯ ನಗರಿ ಆಗಿರುವುದರಿಂದ ಹೊರದೇಶಗಳಿಂದ ವಿದ್ಯಾರ್ಥಿಗಳು ಹಾಗೂ ವಾಣಿಜ್ಯೋದ್ಯಮಿಗಳು ನಿರಂತರವಾಗಿ ಆಗಮಿಸುತ್ತಿರುತ್ತಾರೆ. ಅಲ್ಲದೆ, ಇಲ್ಲಿನ ಉದ್ಯೋಗಸ್ಥರು ಹೊರದೇಶಗಳಿಗೆ ಹೆಚ್ಚಾಗಿ ಹೋಗುತ್ತಿದ್ದಾರೆ. ಹಾಗಾಗಿ, ಇಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಯಾಗಬೇಕೆಂದು ಕ್ಷೇತ್ರದ ಜನತೆಯ ಒತ್ತಾಸೆಯಾಗಿತ್ತು. ಕೇಂದ್ರ ಸರ್ಕಾರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಜಿಲ್ಲೆಯಲ್ಲಿ ಪಾಸ್‍ಪೋರ್ಟ್ ಸೇವಾಕೇಂದ್ರದ ಅವಶ್ಯಕತೆಯಿದೆ ಎಂದು ಬೇಡಿಕೆ ಇಟ್ಟು ಅದನ್ನು ನೆರವೇರಿಸಿದ ಸಂತೃಪ್ತಿ ನನಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಧ್ಯಕರ್ನಾಟಕ ಭಾಗದಲ್ಲಿ ಅಚ್ಚ ಕನ್ನಡ ಭಾಷೆಯ ಬಳಕೆಯೇ ಹೆಚ್ಚು. ಹಾಗೂ ಗ್ರಾಮೀಣ ಪ್ರದೇಶದಿಂದ ಬರುವವರ ಸಂಖ್ಯೆಯೂ ಹೆಚ್ಚಾಗಿದ್ದು, ಈ ಸೇವಾಕೇಂದ್ರ ಕನ್ನಡ ಬರುವಂತಹ ಅಧಿಕಾರಿಗಳನ್ನು ನೇಮಿಸುವ ಮೂಲಕ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಉತ್ತಮ ಸೇವೆ ಒದಗಿಸಬೇಕಾಗಿದೆ. ಅಲ್ಲದೇ ಕರ್ನಾಟಕದಲ್ಲಿಯೇ ದಾವಣಗೆರೆ ಅಂಚೆಕಚೇರಿಯ ಮಾದರಿ ಅಂಚೆ ಪಾಸ್‍ಪೋರ್ಟ್ ಸೇವಾಕೇಂದ್ರವನ್ನಾಗಿ ರೂಪಿಸಬೇಕೆಂದು ಅಧಿಕಾರಿಗಳಿಗೆ ಹೇಳಿದರು.
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದಿಂದ ಮುಂದಿನ ದಿನಗಳಲ್ಲಿರಾಷ್ಟ್ರೀಯ ಬುದ್ಧಿಮಾಂದ್ಯ ಮಕ್ಕಳ ಚಿಕಿತ್ಸಾ ಕೇಂದ್ರವನ್ನು ಹಾಗೂ ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರವನ್ನು ಆರಂಭಿಸಲಾಗುವುದು. ಕೇಂದ್ರ ಸರ್ಕಾರದ ಸಿಆರ್‍ಎಫ್ ಅನುದಾನದಡಿ ರಸ್ತೆಗಳ ಅಭಿವೃದ್ಧಿಗೆ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚಿತ್ರದುರ್ಗ-ಕುಮುಟ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರ ಮಂಜೂರಾತಿ ನೀಡಿ ಒಪ್ಪಿಗೆ ಸೂಚಿಸಿದೆ. ಅಲ್ಲದೇ ಹರಿಹರದಲ್ಲಿ 01 ಎಥೆನಾಲ್ ಘಟಕಗಳನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ರೂ.960 ಕೋಟಿ ಅನುದಾನ ಬಿಡುಗಡೆಯಾಗಿದೆ ಹಾಗೂ ಕೆಐಎಡಿಬಿ ವತಿಯಿಂದ 50 ಎಕರೆ ಜಮೀನು ಸಹ ಮಂಜೂರಾಗಿದೆ. ಇದರಿಂದ 80 ಜನರಿಗೆ ಉದ್ಯೋಗವಕಾಶ ಸಿಗುತ್ತದೆ ಎಂದು ಹೇಳಿ ಇತರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು.
ಬೆಂಗಳೂರು ವಿಭಾಗೀಯ ಪಾಸ್‍ಪೋರ್ಟ್ ಕಚೇರಿಯ ಐಎಫ್‍ಎಸ್ ಅಧಿಕಾರಿ ಭರತ್‍ಕುಮಾರ್ ಕುತಟಿ ಮಾತನಾಡಿ, ಪಾಸ್‍ಪೋರ್ಟ್‍ಗೆ ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ ನಂತರದ 10 ದಿನಗಳ ಒಳಗಾಗಿ ಪಾಸ್‍ಪೋರ್ಟ್ ವಿತರಣೆ ಮಾಡಲಾಗುವುದು. ಒಂದು ವೇಳೆ ಅರ್ಜಿದಾರರಿಗೆ ಪೊಲೀಸ್ ಪರಿಶೀಲನೆಗೊಳಪಡಿಸಿದರೆ 30 ದಿನಗಳೊಗಾಗಿ ವಿತರಣೆ ಹಾಗೂ ತಾತ್ಕಾಲಿಕ ಪಾಸ್‍ಪೋರ್ಟ್ ಗೆಜೆಟೆಡ್ ಅಧಿಕಾರಿಗಳ ಸಹಿಯೊಂದಿಗೆ 3-4 ದಿನಗಳೊಳಗಾಗಿ ವಿತರಣೆ ಮಾಡಲಾಗುವುದು. ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಜಿ.ಪಂ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು, ಮೇಯರ್ ಅನಿತಾಬಾಯಿ ಮಾಲತೇಶ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್‍ರಾವ್ ಜಾಧವ್, ಜಿ.ಪಂ.ಸದಸ್ಯೆ ಶೈಲಜಾ ಬಸವರಾಜ್, ದಕ್ಷಿಣ ಕರ್ನಾಟಕ ವಿಭಾಗೀಯ ಅಧಿಕಾರಿ ಎಸ್. ರಾಜೇಂದ್ರ ಕುಮಾರ್, ಚಿತ್ರದುರ್ಗ ಅಂಚೆಕಚೇರಿಯ ಅಧೀಕ್ಷಕ ಎನ್ ಬಿ ಬಸನಕಟ್ಟಿ ಇದ್ದರು.