ಪ್ರತಿಯೊಬ್ಬರು ಅನ್ಯಾಯದ ವಿರೋಧಿಯಾದರೆ ಮಾತ್ರ ಸಾಮಾಜಿಕ ನ್ಯಾಯ: ಅನ್ನಿಸ್ ಕಣ್ಮಣಿ ಜಾಯ್
ತುಮಕೂರು,ಫೆ.21: ಭಾರತದ ಪ್ರತಿಯೊಬ್ಬ ಪ್ರಜೆಯೂ ಅನ್ಯಾಯದ ವಿರೋಧಿ ಸಂಘಟಿತರಾದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಾಗುತ್ತದೆ ಎಂದು ಜಿ.ಪಂ.ಸಿಇಓ ಅನ್ನಿಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ನಗರದ ಮಾರಿಯಮ್ಮ ನಗರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಸಮಾಜಿಕ ನ್ಯಾಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಈ ನಿಟ್ಟಿನಲ್ಲಿ ಅನ್ಯಾಯವನ್ನು ಪ್ರಶ್ನೆ ಮಾಡುವ ಮೂಲಕ ನ್ಯಾಯ ಪಡೆದುಕೊಳ್ಳುವತ್ತ ಸಾಗಬೇಕು. ಸಮಾಜದಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕೆಂದರೆ ಹೋರಾಟ ಮಾಡಬೇಕೆಂದು ಹೇಳುತ್ತಾರೆ. ಸಮಾಜದಲ್ಲಿ ಶೈಕ್ಷಣಿಕವಾಗಿ ವಂಚಿತರಾಗಿದ್ದು, ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತಾಗಬೇಕು ಎಂದರು.
ಗೌರವಾನ್ವಿತ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ವೆಂಕಟೇಶ್ ಮಾತನಾಡಿ, ಉನ್ನತ ಶಿಕ್ಷಣ ಪಡೆಯುವ ಮೂಲಕ ಶೋಷಿತ ವರ್ಗದವರು ಆಳುವ ವರ್ಗದವರಾದಲ್ಲಿ ಮಾತ್ರ ಸಮಾಜದಲ್ಲಿ ಸಮಾನತೆ ಕಾಪಾಡಬಹುದಾಗಿರುತ್ತದೆ. ಅಂಬೇಡ್ಕರ್ ಅವರು ಸಮಗ್ರ ಅಧ್ಯಯನ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಶ್ವದಲ್ಲಿಯೇ ಬೃಹತ್ ಸಂವಿಧಾನವನ್ನು ರಚಿಸಿದರು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸ್ಪೀಪ್ ಸಮಿತಿ ಹೊರತಂದಿರುವ ಚುನಾವಣಾ ಲೋಗೋವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿನಾರಾಳ್ಕರ್,ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ||ಜಿ.ಪಿ.ದೇವರಾಜ್,ಸರ್ಕಲ್ ಇನ್ಸ್ ಸ್ಪೆಕ್ಟರ್ ಪಾರ್ವತಮ್ಮ ಮತ್ತಿತರರು ಹಾಜರಿದ್ದರು.