ತುಮಕೂರು: ಬಾಲಕಿಯರ ಹಾಸ್ಟೆಲ್‍ಗೆ ಜಿ.ಪಂ ಅಧ್ಯಕ್ಷೆ ದಿಢೀರ್ ಭೇಟಿ
ತುಮಕೂರು,ಫೆ.21: ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಸರಕಾರಿ ಟಿಸಿಹೆಚ್ ಮತ್ತು ಬಿಎಡ್ ಕಾಲೇಜಿನ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸದರಿ ಹಾಸ್ಟೆಲ್‍ಗೆ ಹಠಾತ್ ಭೇಟಿ ನೀಡಿದ ಜಿ.ಪಂ.ಅಧ್ಯಕ್ಷೆ ಲತಾರವಿಕುಮಾರ್ ಹಾಸ್ಟೆಲ್‍ನ ಪ್ರತಿಯೊಂದು ಕೊಠಡಿಗೂ ತೆರಳಿ ವಿದ್ಯಾರ್ಥಿನಿಯರ ಸ್ಥಿತಿಗತಿ, ಅವರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ವೀಕ್ಷಿಸಿ, ನಂತರ ಬಾಲಕಿಯರಿಂದಲೇ ಹಾಸ್ಟೆಲ್ ವ್ಯವಸ್ಥೆ ಕುರಿತು ಮಾಹಿತಿ ಪಡೆದರು.
ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿಯರಿಗೆ ದಿನದ ಮೂರೊತ್ತು ಕೊಡುವ ಊಟಕ್ಕೆ ಬಳಸುವ ಆಹಾರ ಪದಾರ್ಥಗಳು ಮತ್ತು ತರಕಾರಿಯನ್ನು ಪರಿಶೀಲಿಸಿದಾಗ, ತರಕಾರಿ ಕೊಳೆತಿರುವುದು ಕಂಡು ಬಂದಿತು. ತಕ್ಷಣ ವಿದ್ಯಾರ್ಥಿನಿಯರ ಬಳಿಗೆ ತೆರಳಿದ ಅಧ್ಯಕ್ಷರು, ಈ ಕುರಿತು ವಿದ್ಯಾರ್ಥಿನಿಯರನ್ನು ಕೇಳಿದಾಗ ಹಾಸ್ಟೆಲ್‍ನಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಸಾಂಬರಿಗೆ ಬಳಸುವ ತರಕಾರಿ ಕಳಪೆ ಗುಣಮಟ್ಟದ್ದಾಗಿದೆ. ಇನ್ನು ಮುಂದೆ ಹೀಗಾದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚನೆ ನೀಡಿದರು.
ವಿದ್ಯಾರ್ಥಿನಿಯರಿಂದ ಸಮಸ್ಯೆ ಆಲಿಸಿದ ಬಳಿಕ ಜಿ.ಪಂ.ಅಧ್ಯಕ್ಷೆ ಲತಾ ಅವರು ಸ್ವತಃ ಅಡುಗೆ ಮನೆಗೆ ಹೋಗಿ ಆಹಾರವನ್ನು ಪರೀಕ್ಷಿಸಿ, ವಿದ್ಯಾರ್ಥಿನಿಯರಿಗೆ ಊಟ ಮಾಡಿಸುವ ಮೂಲಕ ಅವರು ಸಹ ಅಲ್ಲಿಯೇ ಊಟ ಮಾಡಿದರು.ಈ ವೇಳೆ ಕೆಲ ವಿದ್ಯಾರ್ಥಿನಿಯರಿಗೆ ಕೈ ತುತ್ತು ತಿನ್ನಿಸಿದರು.