ಮಂಡ್ಯ: ಪೋಷಕರ ಸಭೆಯಲ್ಲಿಯೇ ಎಸ್‍ಡಿಎಂಸಿ ಅಧ್ಯಕ್ಷ ನಿಧನ
Update: 2018-02-21 23:23 IST
ಮಂಡ್ಯ, ಫೆ.21: ಸಾರ್ವಜನಿಕ ಪ್ರೌಢಶಾಲೆಯಲ್ಲಿ ಬುಧವಾರ ನಡೆಯುತ್ತಿದ್ದ ಪೋಷಕರ ಸಭೆಯಲ್ಲಿ ಎಸ್‍ಡಿಎಂಸಿ ಅಧ್ಯಕ್ಷರು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜೇಂದ್ರ ಮೊದಲಿಯರ್(55) ಮೃತಪಟ್ಟವರು. ಶಾಲೆಯ ದೈಹಿಕ ಶಿಕ್ಷಕ ಬಸವರಾಜ್, ಶಿಕ್ಷಕ ಶಿವಣ್ಣ ಬಳಿ ಮನೆಪಾಠಕ್ಕೆ ತೆರಳಬಾರದೆಂದು ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿತ್ತು.
ವಿಷಯ ಕುರಿತಂತೆ ಚರ್ಚೆ ನಡೆಯುತ್ತಿದ್ದ ವೇಳೆ ರಾಜೇಂದ್ರ ಮೊದಲಿಯಾರ್ ಕುಸಿದುಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದರು ಎಂದು ಹೇಳಲಾಗಿದೆ.