ಮಂಡ್ಯ: ಫೆ.22 ರಂದು ಕೆ.ಎಸ್.ಪುಟ್ಟಣ್ಣಯ್ಯ ಅಂತ್ಯಕ್ರಿಯೆ; ಜಿಲ್ಲಾಡಳಿತದಿಂದ ಅಂತ್ಯಕ್ರಿಯೆಗೆ ಸಿದ್ದತೆ
ಮಂಡ್ಯ, ಫೆ.21: ರವಿವಾರ ನಿಧನರಾದ ಶಾಸಕ, ರೈತಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ ಫೆ.22 ರಂದು ಬೆಳಗ್ಗೆ 11ಕ್ಕೆ ಹುಟ್ಟೂರು ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ನಡೆಯಲಿದೆ. ಗ್ರಾಮದ ಪುಟ್ಟಣ್ಣಯ್ಯ ಅವರ ತೋಟದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ಎಲ್ಲ ರೀತಿಯ ಪೂರ್ವಸಿದ್ಧತೆ ಮಾಡಿಕೊಂಡಿದೆ.
ಮೈಸೂರಿನ ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಶೈತ್ಯಾಗಾರದಲ್ಲಿರುವ ಪುಟ್ಟಣ್ಣಯ್ಯ ಅವರ ಪಾರ್ಥೀವ ಶರೀರವನ್ನು ಗುರುವಾರ ಬೆಳಗ್ಗೆ 6ಕ್ಕೆ ಪಾಂಡವಪುರಕ್ಕೆ ತಂದು ಮೆರವಣಿಗೆ ಮೂಲಕ ಕ್ಯಾತನಹಳ್ಳಿಗೆ ತೆಗೆದುಕೊಂಡು ಹೋಗಲಾಗುವುದು.
ನಂತರ, ಕ್ಯಾತನಹಳ್ಳಿಯ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟು, ಬೆಳಗ್ಗೆ 11ರ ವೇಳೆಗೆ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ.
ಅಂತ್ಯಕ್ರಿಯೆ ವೀಕ್ಷಣೆಗಾಗಿ ಆಯಾಕಟ್ಟಿನ ಸ್ಥಳಗಳಲ್ಲಿ ಎಲ್‍ಇಡಿ ಪರದೆ ವ್ಯವಸ್ಥೆ ಮಾಡಲಾಗುವುದು. ಗಣ್ಯರು, ಮಾಧ್ಯಮದವರು, ಕುಟುಂಬದವರಿಗೆ ಪತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.
ಪುತ್ರಿಯರ ಆಗಮನ: ವಿದೇಶದಲ್ಲಿರುವ ಪುಟ್ಟಣ್ಣಯ್ಯ ಅವರ ಪುತ್ರಿಯರಾದ ಅಕ್ಷತಾ, ಸ್ಮಿತಾ, ಸಹೋದರ ರಮೇಶ್ ಪುತ್ರಿ ಮಾನಸ, ಸೊಸೆ ಶಿಲ್ಪಾ, ಅಳಿಯಂದಿರಾದ ಬಾಲು, ಶ್ರೀನಿವಾಸ್, ಮೋಹನ್, ಮೊಮ್ಮಕ್ಕಳು ಹಾಗೂ ಸಹೋದರಿ ರೇಣುಕಾ ಕ್ಯಾತನಹಳ್ಳಿಗೆ ಆಗಮಿಸಿದ್ದಾರೆ.
ತಂದೆಯದು ಸಹಜ ಸಾವು
ತನ್ನ ತಂದೆ ಸಾವಿನ ಬಗ್ಗೆ ಕೆಲವು ವ್ಯಕ್ತಿ ಮತ್ತು ಮಾಧ್ಯಮಗಳಲ್ಲಿ ಅನುಮಾನ ವ್ಯಕ್ತಪಡಿಸಲಾಗಿದ್ದು, ಸಲ್ಲದ ಅನುಮಾನ, ಅಪಪ್ರಚಾರ ಬೇಡವೆಂದು ಪುತ್ರ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ. ಭಾನುವಾರ ತಡರಾತ್ರಿ ಕಬಡ್ಡಿ ಪಂದ್ಯ ವೀಕ್ಷಣೆ ಮಾಡಿಕೊಂಡು ಮಂಡ್ಯದಿಂದ ಕ್ಯಾತನಹಳ್ಳಿಗೆ ಮರಳುತ್ತಿದ್ದಾಗ ಹೃದಯಾಘಾತದಿಂದ ತಂದೆ ಮೃತಪಟ್ಟಿದ್ದು, ರೈತಸಂಘದ ಕಾರ್ಯಕರ್ತರು, ಸಾರ್ವಜನಿಕರು ಅಪಪ್ರಚಾರಕ್ಕೆ ಕಿವಿಗೊಡಬಾರದೆಂದು ಅವರು ಮನವಿ ಮಾಡಿದ್ದಾರೆ.
ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದು, ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರಣ ಮೃತಪಟ್ಟಿದ್ದಾರೆಂದು ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ ಹೇಳಿದ್ದರೆ, ನಿಧನಕ್ಕೂ ವಾರದ ಹಿಂದೆ ಹೃದಯಕ್ಕೆ ಸಮರ್ಪಕವಾಗಿ ರಕ್ತಸಂಚಾರವಾಗುತ್ತಿಲ್ಲವೆಂದು ವೈದ್ಯರು ತಿಳಿಸಿದ್ದರು ಎಂದು ರೈತಸಂಘದ ಮುಖಂಡ ವಿಜಯಕುಮಾರ್ ಹೇಳಿದ್ದಾರೆ.