ಲಿಂಗ ಪತ್ತೆ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಲಿ

Update: 2018-02-21 18:43 GMT

ಮಾನ್ಯರೇ,

ವಿಜ್ಞಾನ ತಂತ್ರಜ್ಞಾನ ಬಾಹ್ಯಾಕಾಶ, ಕಲೆ, ಸಾಹಿತ್ಯ, ಕ್ರೀಡೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಪುರುಷರನ್ನು ಸರಿಗಟ್ಟಿರುವ ಹೆಣ್ಣು ಮಕ್ಕಳು ತಾವು ಯಾವುದರಲ್ಲಿಯೂ ಹಿಂದೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೆಣ್ಣು ಮಕ್ಕಳ ಶ್ರೇಯೋನ್ನತಿಗಾಗಿ ಹಲವು ಪ್ರಗತಿಪರ ಯೋಜನೆಗಳು ಜಾರಿಗೆ ತಂದಿವೆೆ. ಹೀಗಿದ್ದರೂ ಇಂದಿನ ಪುರುಷ ಸಮಾಜ ಹೆಣ್ಣು ಭ್ರೂಣ ಹತ್ಯೆ ಮಾಡುವುದನ್ನು ನಿಲ್ಲಿಸಿಲ್ಲ. ಇದರ ದುಷ್ಪರಿಣಾಮದಿಂದಾಗಿ ವರ್ಷದಿಂದ ವರ್ಷಕ್ಕೆ ಹೆಣ್ಣು ಭ್ರೂಣ ಹತ್ಯೆ ಹೆಚ್ಚುತ್ತಲೇ ಇರುವುದು ಅತ್ಯಂತ ನೋವಿನ ಸಂಗತಿ.
ರಾಜ್ಯದಲ್ಲಿ 2014-15 ಲಿಂಗಾನುಪಾತದ ಪ್ರಕಾರ ಪ್ರತೀ ಸಾವಿರ ಪುರುಷರಿಗೆ 950 ಹೆಣ್ಣು ಮಕ್ಕಳಿದ್ದರು. ಆದರೆ ಇತ್ತೀಚೆಗೆ ಕೇಂದ್ರ ನೀತಿ ಆಯೋಗ ಬಿಡುಗಡೆ ಮಾಡಿರುವ ರಾಜ್ಯವಾರು ಆರೋಗ್ಯ ಸೂಚ್ಯಂಕ ವರದಿಯೊಂದರ ಪ್ರಕಾರ ಹೆಣ್ಣು ಮಕ್ಕಳ ಸಂಖ್ಯೆ 930ಕ್ಕೆ ಕುಸಿತ ಕಂಡಿದೆ ಎಂದು ತಿಳಿಸಿದೆ. ಇದು ವಿಷಾದಕರ ಸಂಗತಿ. ರಾಜ್ಯದಲ್ಲಿ 2003ರಲ್ಲಿ ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಜಾರಿಯಲ್ಲಿ ಇದ್ದರೂ ಕೆಲವು ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ಹಣದ ಆಸೆಗಾಗಿ ಲಿಂಗ ಪತ್ತೆ ಕಾರ್ಯ ನಡೆಸುತ್ತಿವೆ. ಇದರಿಂದಾಗಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚುತ್ತಿವೆ.
ಆದ್ದರಿಂದ ಇನ್ನು ಮುಂದಾದರೂ ಕುಸಿಯುತ್ತಿರುವ ಹೆಣ್ಣಿನ ಸಂತತಿಯನ್ನು ರಕ್ಷಿಸಲು ಸರಕಾರ ಮತ್ತು ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮಾಡಿಸಬೇಕು, ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಹೆಣ್ಣು ಭ್ರೂಣ ಹತ್ಯೆ ಅಪರಾಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಚಿಂತಿಸಲಿ.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News