ಬಾಗೇಪಲ್ಲಿ : ಅಪಘಾತ ಜೀವರಕ್ಷಕ ತರಬೇತಿ ಕಾರ್ಯಗಾರ
ಬಾಗೇಪಲ್ಲಿ,ಫೆ.22: ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅಪಘಾತಕ್ಕೆ ಒಳಗಾಗಿರುವ ವ್ಯಕ್ತಿಯ ಜೀವವನ್ನು ಹಾಗೂ ಗಾಯಾಳುಗಳನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಚಾಲಕರಲ್ಲಿ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಸಿದ್ದಪ್ಪ ತಿಳಿಸಿದರು.
ಪಟ್ಟಣದ ತಾ.ಪಂ ಆವರಣದಲ್ಲಿ ಕರ್ನಾಟಕ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ತಾಲೂಕು ಆಡಳಿತ, ತಾ.ಪಂ ಮತ್ತು ವಿವಿಧ ವಾಹನ ಚಾಲಕರ ಸಂಘಗಳು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಕಾರ್ಮಿಕರ ಸಹಾಯ ಹಸ್ತ ಯೋಜನೆಯಡಿಯಲ್ಲಿ ಅಪಘಾತ ಜೀವರಕ್ಷಕ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವದ್ಯಾದಂತ ಸಂಭವಿಸುವ ರಸ್ತೆ ಅಪಘಾತ ಪ್ರಕರಣಗಳಲ್ಲಿ ಭಾರತ 6ನೇ ಸ್ಥಾನವನ್ನು ಹೊಂದಿದೆ. ಅಪಘಾತ ಸಂಭವಿಸಿದ ಮೊದಲ 60 ನಿಮಿಷಗಳ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ದೊರೆತಲ್ಲಿ ಪ್ರತಿ ವರ್ಷ ಸಮಾರು 1 ಲಕ್ಷಕ್ಕೂ ಹೆಚ್ಚು ಜೀವಗಳನ್ನು ರಕ್ಷಿಸಬಹುದು ಎಂದರು.
ಅಪಘಾತಕೊಳಗಾದವರನ್ನು ರಕ್ಷಿಸುವ ಹಂಬಲವಿದ್ದರೂ ಪ್ರಥಮ ಚಿಕಿತ್ಸೆ ಬಗ್ಗೆ ಅರಿವಿಲ್ಲದಿರುವುದು ಹಾಗೂ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ಅಲೆದಾಡಬೇಕಾಗಿರುವ ಭಯದಿಂದ ಕಣ್ಣು ಮುಂದೆ ಅಪಘಾತ ಸಂಭವಿಸಿದರೂ ಸಹ ನಮಗೂ ಅದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುವಂತಹ ಘಟನೆಗಳು ಹೆಚ್ಚಾಗಿ ಕಂಡು ಬಂದಿವೆ ಎಂದ ಅವರು ಈ ಹಿನ್ನಲೆಯಲ್ಲಿ ಅಪಘಾತಕ್ಕೆ ಒಳಗಾಗುವಂತಹ ಸಂತ್ರಸ್ಥರಿಗೆ ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಹತ್ತಿರದ ಆಸ್ಪತ್ರೆಗೆ ಸೇರಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಗಾಯಾಳುವಿನ ಪ್ರಾಣ ರಕ್ಷಣೆ ಮಾಡುವುದನ್ನು ಉತ್ತೇಜಿಸುವ ದೃಷ್ಠಿಯಿಂದ ರಾಜ್ಯ ಸರ್ಕಾರವೂ ಅಪಘಾತ ಜೀವ ರಕ್ಷಕ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಈ ಸಂದರ್ಭದಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿರುವ ಡಾ.ರಾಜೇಂದ್ರರವರು ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ಹೇಗೆ ಪ್ರಥಮ ಚಿಕಿತ್ಸೆ ನೀಡಬೇಕು, ವ್ಯಕ್ತಿಯನ್ನು ಯಾವ ರೀತಿಯಲ್ಲಿ ರಕ್ಷಣೆ ಮಾಡಬೇಕು ಮುಂತಾದವುಗಳ ಬಗ್ಗೆ ಸವಿವರವಾಗಿ ಚಾಲಕರಿಗೆ ತರಬೇತಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧಿಕಾರಿ ಸಿ.ರವಿ, ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿ ಸುರೇಂದ್ರ, ಟೆಂಪೋ ಲಾರಿ ಮಾಲಕರ ಸಂಘದ ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಕಾರು ಚಾಲಕರ ಯೂನಿಯನ್ ಸದಸ್ಯ ಬಿಟಿಸಿ ಸೀನಾ, ಟಿ.ಎನ್.ಆಂಜನಪ್ಪ, ಪ್ರಕಾಶ್, ವಸಂತ್, ಆಟೋಚಾಲಕರ ಸಂಘದ ಅಧ್ಯಕ್ಷ ಭಾಸ್ಕರ್, ವೆಂಕಟೇಶ್, ಜಿ.ಸಿ ರವಿ. ಕೆ.ಎಂ.ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.