ಇನ್ನೊಂದು ವಾರದಲ್ಲಿ ಗೌರಿ ಲಂಕೇಶ್ ಹಂತಕರ ಮಾಹಿತಿ ಬಹಿರಂಗ: ಗೃಹಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, ಫೆ. 22: ಹಿರಿಯ ಸಾಹಿತಿ ಕಲಬುರಗಿಯವರ ಹತ್ಯೆಗೆ ಸಂಬಂಧಿಸಿದಂತೆ ನಿಖರ ಮಾಹಿತಿ ದೊರೆತಿಲ್ಲ. ಆದರೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರ ಸ್ಪಷ್ಟ ಮಾಹಿತಿ ದೊರೆತಿದ್ದು, ಸದ್ಯದಲ್ಲಿಯೇ ಬಹಿರಂಗಪಡಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರ ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಕಲಬುರಗಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿಯನ್ನು ಕಲೆ ಹಾಕುವ ಕಾರ್ಯ ನಡೆದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಶ್ನೆ ಮಾಡಿದ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಆದಷ್ಟು ಬೇಗ ಹಂತಕರ ಸುಳಿವನ್ನು ಬಹಿರಂಗಗೊಳಿಸುವುದಾಗಿ ಹೇಳುತ್ತಲೇ ಬಂದಿದ್ದೀರಿ. ಈಗಲೂ ಅದನ್ನೇ ಹೇಳುತ್ತಿದ್ದೀರಿ. ಯಾವಾಗ ಬಹಿರಂಗಪಡಿಸುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿ ಎಂದು ಕೇಳಿದರು.
ಅದಕ್ಕೆ ಗೃಹ ಸಚಿವರು, ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಇನ್ನೊಂದು ವಾರದಲ್ಲಿ ಹಂತಕರ ಕುರಿತ ಮಾಹಿತಿಯನ್ನು ತಿಳಿಸಲಾಗುವುದು ಎಂದರು.
ಈ ವೇಳೆ ಬಿಜೆಪಿ ಸದಸ್ಯ ಪ್ರದೀಪ್ ಶೆಟ್ಟರ್ ಮಾತನಾಡಿ, ಹುಬ್ಬಳ್ಳಿಯಲ್ಲಿ ರೌಡಿಗಳ ಹಾವಳಿ ಮಿತಿಮೀರಿದೆ. ಬೆಂಗಳೂರನ್ನು ಮೀರಿಸುವಂತಹ ಪ್ರಕರಣಗಳು ನಡೆಯುತ್ತಿವೆ. ಅಂತಹ ದುಷ್ಕರ್ಮಿಗಳಿಗೆ ಕಂಡಲ್ಲಿ ಗುಂಡು ಹಾಕುವಂತೆ ಪೊಲೀಸರಿಗೆ ಆದೇಶ ನೀಡಬೇಕೆಂದು ಗೃಹ ಸಚಿವರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಸಬ್‌ಇನ್ಸ್‌ಪೆಕ್ಟರ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಪಿಸ್ತೂಲನ್ನು ನೀಡಿರುತ್ತೇವೆ. ಅದನ್ನು ಅವರು ಬಳಸಬಹುದು ಎಂದು ಹೇಳಿದರು.
ಇದೇ ವೇಳೆ ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು 2017ನೆ ಸಾಲಿನಲ್ಲಿ ರಾಜ್ಯದಲ್ಲಿ 63 ಕೊಲೆಗಳು ಹಾಗೂ 185 ಅತ್ಯಾಚಾರ ಪ್ರಕರಣಗಳು ಹಾಗೂ 1,882 ದೌರ್ಜನ್ಯ ಪ್ರಕರಣಗಳು ನಡೆದಿವೆ. ಅದರಲ್ಲಿ 14 ಅತ್ಯಾಚಾರ ಪ್ರಕರಣಗಳು ಮಾತ್ರ ಪತ್ತೆಯಾಗಿವೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿ ಪೊಲೀಸ್ ಠಾಣೆಯಲ್ಲಿ ತಿಂಗಳ ಎರಡನೆ ರವಿವಾರ ದಲಿತರ ದಿನವನ್ನಾಗಿ ಆಚರಿಸಿ, ಸ್ಥಳೀಯ ದಲಿತ ಮುಖಂಡರನ್ನು ಸಭೆಗೆ ಆಹ್ವಾನಿಸಿ ದಲಿತರ ಕುಂದು ಕೊರತೆಗಳನ್ನು ಆಲಿಸಿ ವಿಚಾರಣೆ ಕೈಗೊಂಡು ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ. ಇದು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.