×
Ad

24 ಸಾವಿರ ಬೀದಿ ವ್ಯಾಪಾರಿಗಳಿಗೆ ಶೀಘ್ರದಲ್ಲಿಯೆ ಗುರುತಿನ ಚೀಟಿ: ಕೆ.ಜೆ.ಜಾರ್ಜ್

Update: 2018-02-22 18:48 IST

ಬೆಂಗಳೂರು, ಫೆ.22: ಬೆಂಗಳೂರು ಮಹಾನಗರದಲ್ಲಿನ ಪಾದಚಾರಿ ಮಾರ್ಗಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ 24 ಸಾವಿರ ಬೀದಿ ವ್ಯಾಪಾರಿಗಳನ್ನು ಗುರುತಿಸಲಾಗಿದ್ದು, ಸದ್ಯದಲ್ಲೇ ಅವರಿಗೆ ಗುರುತಿನ ಚೀಟಿ ನೀಡಿ, ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಗುರುವಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪಾದಚಾರಿಗಳ ಮಾರ್ಗವೇ ಇಲ್ಲ. ಈ ಬಗ್ಗೆ ಏನಾದರೂ ಕ್ರಮ ಕೈಗೊಂಡಿದ್ದಿರಾ, ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿದ್ದಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಾದಚಾರಿ ಮಾರ್ಗಗಳಲ್ಲಿ ಯಾವುದೇ ರೀತಿಯ ವ್ಯಾಪಾರ ವಹಿವಾಟು ಮಾಡಬಾರದು ಎಂದು ಈಗಾಗಲೇ ಸುತ್ತೋಲೆ ಹೊರಡಿಸಿದ್ದೇವೆ. ಆದರೆ ಅದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಮಾನವೀಯ ದೃಷ್ಟಿಯಿಂದ ಅವರಿಗೆ ಮಾರಾಟ ಮಾಡಲು ಅವಕಾಶ ನೀಡುವ ನಿಟ್ಟಿನಲ್ಲಿ ವಲಯ ಮತ್ತು ವಾರ್ಡ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ, ಬೀದಿ ವ್ಯಾಪಾರಿಗಳನ್ನು ಗುರುತಿಸುವ ಕಾರ್ಯ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ಅವರಿಗೆ ಗುರುತಿನ ಚೀಟಿ ನೀಡಲಾಗುವುದು ಎಂದು ಹೇಳಿದರು.

ಮತ್ತೊಂದು ಉಪ ಪ್ರಶ್ನೆ ಕೇಳಿದ ಸದಸ್ಯ ರಮೇಶ್ ಅವರು, ಕಲಾಸಿಪಾಳ್ಯ ಸೇರಿದಂತೆ, ವಿವಿಧ ಪ್ರದೇಶಗಳಲ್ಲಿ ರಸ್ತೆಗಳಲ್ಲಿಯೇ ವರ್ಕ್ಸ್ ಶಾಪ್‌ಗಳನ್ನು ತೆಗೆದು ಬಹಳ ತೊಂದರೆಯಾಗುತ್ತಿದೆ. ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಆಗ ಸಚಿವರು, ಇದನ್ನು ನಾನೂ ಸಹ ಕಣ್ಣಾರೆ ಕಂಡಿದ್ದೇನೆ. ಇದರ ಜೊತೆಗೆ ಪೊಲೀಸ್ ಠಾಣೆಗಳ ಬಳಿ ಹಳೆಯ ವಾಹನಗಳನ್ನು ಹಿಡಿದು ರಸ್ತೆಬದಿಯಲ್ಲೇ ವರ್ಷಾನುಗಟ್ಟಲೆ ಹಾಕಿರುತ್ತಾರೆ. ಇದನ್ನು ಮನಗಂಡು ವಿದೇಶಗಳಲ್ಲಿರುವಂತೆ ಬೆಂಗಳೂರಿನ ಹೊರಪ್ರದೇಶದಲ್ಲಿ ತ್ಯಾಜ್ಯ ವಸ್ತುಗಳ ಯಾರ್ಡ್ ಮಾಡುವ ಚಿಂತನೆ ಸರಕಾರಕ್ಕಿದೆ ಎಂದು ಹೇಳಿದರು.

ಸರಕಾರ ಗುರುತಿಸುವ ಬೀದಿ ವ್ಯಾಪಾರಿಗಳಿಗೆ ಯಾವ ರೀತಿಯ ಷರತ್ತುಗಳು ಇರುತ್ತವೆ ಎಂಬ ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಓರ್ವ ವ್ಯಾಪಾರಿಗೆ ಒಂದು ನಿಗದಿತ ಸ್ಥಳವನ್ನು ಮೀಸಲಿಡಲಾಗುತ್ತದೆ. ಆದರೆ ಅದು ಶಾಶ್ವತ ಅಂಗಡಿ ತೆರೆಯಲು ಅನುಮತಿ ನೀಡಿರುವುದಿಲ್ಲ. ಸರಕಾರ ಯಾವಾಗ ಬೇಕಾದರೂ ಆ ಸ್ಥಳವನ್ನು ತೆರವುಗೊಳಿಸಬಹುದು ಮತ್ತು ವ್ಯಾಪಾರಿ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆಯವರೆಗೆ ತನ್ನ ವ್ಯಾಪಾರವನ್ನು ನಡೆಸಬಹುದೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News