ಬಾಗೇಪಲ್ಲಿಯಲ್ಲಿ ಕಂಪಿಸಿದ ಭೂಮಿ
ಬಾಗೇಪಲ್ಲಿ,ಫೆ.22: ತಾಲೂಕಿನ ಯಲ್ಲಂಪಲ್ಲಿ ಮತ್ತು ಪರಗೋಡು ಗ್ರಾ.ಪಂ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿ ಬುದವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಎರಡು ಭಾರಿ ಭೂಮಿ ಕಂಪಿಸಿರುವ ಘಟನೆ ನಡೆದಿದೆ.
ತಾಲೂಕಿನ ಯಲ್ಲಂಪಲ್ಲಿ ಗ್ರಾ.ಪಂ ವ್ಯಾಪ್ತಿಯ ಲಗುಮದ್ದೇಪಲ್ಲಿ, ಐವಾರಪಲ್ಲಿ, ಚಿಕ್ಕತಿಮ್ಮನಹಳ್ಳಿ, ಪಾಕುಪಟ್ಟಲ್ಲಹಳ್ಳಿ ಹಲವು ಗ್ರಾಮಗಳಲ್ಲಿ ಲಗು ಭೂಕಂಪನವಾಗಿರುವುದಾಗಿ ತಿಳಿದುಬಂದಿದೆ.
ಭೂಮಿ ಕಂಪಿಸಿರುವ ಸಂದರ್ಭದಲ್ಲಿ ಹಲವು ಗ್ರಾಮಗಳ ಮನೆಗಳಲ್ಲಿ ಭಾರಿ ಶಬ್ದ ಉಂಟಾಗಿ, ಮನೆಯಲ್ಲಿದ್ದ ಪಾತ್ರೆಗಳು ಅಲುಗಾಡಿವೆ, ಕೆಲವು ಮನೆಗಳಲ್ಲಿ ಕೆಳಕ್ಕೆ ಬಿದ್ದಿವೆ. ಇದರಿಂದ ಭಯಭೀತರಾದ ಗ್ರಾಮಸ್ಥರು ಮನೆಗಳಿಂದ ಹೊರಬಂದು ರಸ್ತೆಯಲ್ಲಿ ಆಶ್ರಯ ಪಡಿದಿದ್ದಾರೆ.
ಈ ಸಂಬಂಧ ಗುರುವಾರ ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಾಮ್‍ಜೀನಾಯಕ್ ಅಧಿಕಾರಿಗಳೊಂದಿಗೆ ಲಘುಭೂಕಂಪ ಸಂಭವಿಸಿರುವ ಗ್ರಾಮಗಳಿಗೆ ಬೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಭೂಮಾಪನ ಕೇಂದ್ರದ ವರದಿಯಂತೆ ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ ಶೇ.1.2ರಷ್ಟು ಎಂಬುದಾಗಿ ತಿಳಿದರು.
ಶೇ.5ರಷ್ಟು ತೀವ್ರತೆಗಿಂತ ಹೆಚ್ಚು ಪ್ರಮಾಣದಲ್ಲಿ ಭೂಮಿ ಕಂಪಿಸಿದರೆ ಅಪಾಯ ಕಟ್ಟಿಟ್ಟಬುತ್ತಿ, ಭೂಮಿ ಒಳಗೆ ನಡೆಯುವ ನಿರಂತರ ಪ್ರಕ್ರಿಯೆಯಿಂದ ಸ್ಥಾನಪಲ್ಲಟ ಸಂಭವಿಸಿದಾಗ ಈ ರೀತಿಯಲ್ಲಿ ಕಂಪಿಸುತ್ತೆ. ಚಿಕ್ಕಬಳ್ಳಾಪುರ ಜಿಲ್ಲೆ ಭೂಕಂಪ ತೀವ್ರತೆ ಪ್ರದೇಶವಲ್ಲ, ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಹಮ್ಮದ್ ಅಸ್ಲಂ ಇತರೆ ಅಧಿಕಾರಿಗಳು ಇದ್ದರು.