ಮೇಕೆದಾಟು ಯೋಜನೆ ಜಾರಿಗೆ ಸರಕಾರ ಬದ್ಧ : ಮುಖ್ಯಮಂತ್ರಿ

Update: 2018-02-22 14:31 GMT

ಬೆಂಗಳೂರು, ಫೆ.22: ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಕೇಂದ್ರ ಸರಕಾರದ ಜಲಸಂಪನ್ಮೂಲ ಇಲಾಖೆಗೆ ಡಿಪಿಆರ್ ಸಲ್ಲಿಸಲಾಗಿದ್ದು, ತ್ವರಿತಗತಿಯಲ್ಲಿ ಇದನ್ನು ಜಾರಿಗೊಳಿಸಲು ಅನುಮತಿ ನೀಡುವಂತೆ ಕೋರಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಫೆ.16ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಮಗೆ ಸಮಾಧಾನ ತಂದಿದೆ. ಅದೇ ರೀತಿ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಸರಕಾರ ಬದ್ಧವಾಗಿದೆ ಎಂದರು.

ನೀರಾವರಿ, ವಿದ್ಯುತ್ ಉತ್ಪಾದನೆಗೆ ಮೇಕೆದಾಟು ಅಣೆಕಟ್ಟು ಯೋಜನೆ ಸಹಕಾರಿಯಾಗಲಿದೆ. ಕೇಂದ್ರ ಜಲಸಂಪನ್ಮೂಲ ಇಲಾಖೆಯು ಅನುಮತಿ ನೀಡಿದ ಕೂಡಲೆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಕಾವೇರಿ ವಿಚಾರದಲ್ಲೂ ಕೆಲವರು ರಾಜಕೀಯ ಮಾಡಲು ಪ್ರಯತ್ನಿಸಿದರು. ರಾಜ್ಯದ ವಕೀಲರು ಸರಿಯಾಗಿ ವಾದ ಮಂಡಿಸಿಲ್ಲ ಎಂದು ತೀರ್ಪು ಬರುವ ಮುನ್ನಾ ದಿನ ಆರೋಪಿಸಿದರು. ಆದರೆ, ಸುಪ್ರೀಂಕೋರ್ಟ್ ತೀರ್ಪಿನಿಂದ ಎಲ್ಲರೂ ಸಮಾಧಾನದ ಉಸಿರು ಬಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಅನ್ವಯ ನಾವು ತಮಿಳುನಾಡಿಗೆ ಬಿಳಿಗುಂಡ್ಲು ಜಲಾಶಯದಿಂದ 192 ಟಿಎಂಸಿ ನೀರು ಕೊಡಬೇಕಿತ್ತು. ಇದೀಗ ನಮ್ಮ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡುವಂತೆ ಹೇಳಿದೆ. ಆ ಮೂಲಕ ನಮಗೆ 14.75 ಟಿಎಂಸಿಯಷ್ಟು ಹೆಚ್ಚುವರಿ ನೀರು ಸಿಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದಕ್ಕೂ ಮುನ್ನ ಬೆಂಗಳೂರು ಕಾವೇರಿ ನದಿ ಪ್ರದೇಶದ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಇದೀಗ ಬೆಂಗಳೂರಿಗೆ ಕುಡಿಯುವ ಉದ್ದೇಶಕ್ಕಾಗಿ 4.75 ಟಿಎಂಸಿ ನೀರು ಬಳಕೆಗೆ ಅವಕಾಶ ನೀಡಿದೆ ಎಂದು ಮುಖ್ಯಮಂತ್ರಿ ಹರ್ಷವ್ಯಕ್ತಪಡಿಸಿದರು.

ಮಹದಾಯಿ ನದಿ ನೀರಿನ ವಿವಾದವೂ ಇದೇ ರೀತಿಯಲ್ಲಿ ಪರಿಹಾರವಾಗುತ್ತದೆ ಎಂಬ ವಿಶ್ವಾಸವಿದೆ. ಕಾವೇರಿ ನೀರಿನ ವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವಾಗ ಸುಪ್ರೀಂಕೋರ್ಟ್, ನದಿಗಳು ಯಾವ ರಾಜ್ಯದ ಸ್ವತ್ತಲ್ಲ. ಅವುಗಳು ರಾಷ್ಟ್ರೀಯ ಆಸ್ತಿ ಎಂದಿರುವುದನ್ನು ಸಿದ್ದರಾಮಯ್ಯ ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News