ಕೇಂದ್ರದಿಂದ ರಾಜ್ಯಕ್ಕೆ 3 ಲಕ್ಷ ಕೋಟಿ ರೂ.ಅನುದಾನ: ಜಗದೀಶ್ ಶೆಟ್ಟರ್

Update: 2018-02-22 14:39 GMT

ಬೆಂಗಳೂರು, ಫೆ.22: ಐದು ವರ್ಷಗಳಲ್ಲಿ ರಾಜ್ಯಕ್ಕೆ ಕೇಂದ್ರದಿಂದ 2.01 ಲಕ್ಷ ಕೋಟಿ ರೂ., ಬೇರೆ ಬೇರೆ ಯೋಜನೆಗಳಲ್ಲಿ 1 ಲಕ್ಷ ಕೋಟಿ ರೂ.ಹೀಗೆ ಒಟ್ಟು 3 ಲಕ್ಷ ಕೋಟಿ ರೂ.ಗಳು ನಮ್ಮ ರಾಜ್ಯಕ್ಕೆ ಹಂಚಿಕೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ತಿಳಿಸಿದರು.

ಗುರುವಾರ ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಮ್ಮ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಅನುದಾನ ಬಂದಿರಲಿಲ್ಲ. ಇದೊಂದು ದಾಖಲೆಯಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಯಾಗಿ ನಮ್ಮ ರಾಜ್ಯದ 4 ಸಾವಿರ ಕಿ.ಮೀ ರಸ್ತೆಯನ್ನು ಘೋಷಿಸಿದ್ದ ಕೇಂದ್ರ ಸರಕಾರ, ಇತ್ತೀಚೆಗಷ್ಟೇ ಇನ್ನು 3 ಸಾವಿರ ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ರಾಷ್ಟ್ರೀಯ ಹೆದ್ದಾರಿಗಳು ಕೇಂದ್ರ ಸರಕಾರದ ಆಸ್ತಿ. ಅವುಗಳ ಅಭಿವೃದ್ಧಿ, ನಿರ್ವಹಣೆಗೆ ಕೇಂದ್ರ ಸರಕಾರ ಹಣ ನೀಡಲೇಬೇಕು. ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶ, ಅದೇ ರೀತಿ ನಮ್ಮ ರಾಜ್ಯವು ಅಭಿವೃದ್ಧಿ ಹೊಂದುತ್ತಿದೆ. ಜಿಲ್ಲಾ ಪಂಚಾಯಿತಿ ರಸ್ತೆಗಳು, ರಾಜ್ಯ ಹೆದ್ದಾರಿಯಾಗಿ, ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರುವುದು ಸಾಮಾನ್ಯವಾದ ಪ್ರಕ್ರಿಯೆ ಎಂದರು.

ನಂತರ ಮಾತು ಮುಂದುವರೆಸಿದ ಜಗದೀಶ್ ಶೆಟ್ಟರ್, ಕೇಂದ್ರ ಸರಕಾರವು ರಾಜ್ಯಕ್ಕೆ ಸ್ಮಾರ್ಟ್ ಸಿಟಿಗಳು ಹಾಗೂ ಐಐಟಿ ನೀಡಿದೆ. ರೈಲ್ವೆ ಇಲಾಖೆಗೆ ಈ ಹಿಂದೆ ಯಾವ ಸರಕಾರಗಳು ನೀಡದಷ್ಟು ಅನುದಾನವನ್ನು ನೀಡಿದೆ. ಅಲ್ಲದೆ, ಬೆಂಗಳೂರು-ಮೈಸೂರು ನಡುವೆ ಎಂಟು ಪಥಗಳ ರಸ್ತೆ ನಿರ್ಮಾಣಕ್ಕೆ 6 ಸಾವಿರ ಕೋಟಿ ರೂ.ಅನುದಾನ ನೀಡಿದೆ ಎಂದರು.

ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿಯನ್ನು ಟೀಕೆ ಮಾಡದಿದ್ದರೆ ಮುಖ್ಯಮಂತ್ರಿಗೆ ನಿದ್ದೆಯೆ ಬರುವುದಿಲ್ಲ. ಅಪನಗದೀಕರಣ ಹಾಗೂ ಜಿಎಸ್‌ಟಿ ಜಾರಿಯಿಂದಾಗಿ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂದು ಪದೇ ಪದೇ ಮುಖ್ಯಮಂತ್ರಿ ಹೇಳುತ್ತಿದ್ದರು. ಆದರೆ, ನಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ಯಾವುದೇ ಪರಿಣಾಮ ಬೀರದಿರುವುದು ನಾವು ಕಾಣುತ್ತಿದ್ದೇವೆ ಎಂದು ಶೆಟ್ಟರ್ ಹೇಳಿದರು.

ನೀತಿ ಆಯೋಗದ ಸಭೆಗಳಿಗೆ ಮುಖ್ಯಮಂತ್ರಿ ಹೋಗುವುದಿಲ್ಲ. ರಾಜ್ಯದ ಬೇಡಿಕೆಗಳನ್ನು ಕೇಂದ್ರದ ಮುಂದಿಡುವುದಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿರುವ ನಾವು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಿಗೆ ಹೋಗಬೇಕು. ಒಳ್ಳೆಯ ಕೆಲಸ ಮಾಡಿದಾಗ ಮೆಚ್ಚುಗೆ ವ್ಯಕ್ತಪಡಿಸಲು ರಾಜ್ಯ ಸರಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದು ಅವರು ಟೀಕಿಸಿದರು.

ಕುಡಿಯುವ ನೀರಿನ ಉದ್ದೇಶಕ್ಕಾಗಿ 1389.46 ಕೋಟಿ ರೂ., ಸ್ವಚ್ಛಭಾರತ್ ಯೋಜನೆಯಡಿ 1932 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಒದಗಿಸಿದೆ. ನಮ್ಮ ರಾಜ್ಯದಲ್ಲಿ ಇನ್ನು 8.50 ಲಕ್ಷ ಕುಟುಂಬಗಳು ವೈಯಕ್ತಿಕ ಶೌಚಾಲಯವನ್ನು ಹೊಂದಿಲ್ಲ. ಈ ಬಗ್ಗೆ ಸರಕಾರ ಯಾಕೆ ಗಮನ ಹರಿಸುತ್ತಿಲ್ಲ ಎಂದು ಶೆಟ್ಟರ್ ಪ್ರಶ್ನಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿ, ದಾವಣಗೆರೆ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ತುಮಕೂರು ನಗರಗಳಿಗೆ ಒಟ್ಟು 836 ಕೋಟಿ ರೂ.ಗಳನ್ನು ಒದಗಿಸಲಾಗಿದೆ. 240 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಇದರ ಬಗ್ಗೆ ರಾಜ್ಯ ಸರಕಾರ ಯಾಕೆ ಮೆಚ್ಚುಗೆ ವ್ಯಕ್ತಪಡಿಸುವುದಿಲ್ಲ ಎಂದು ಅವರು ಹೇಳಿದರು.

ಸಿಆರ್‌ಎಫ್ ಅಡಿಯಲ್ಲಿ 3800 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ನೀಡಿದೆ. ಆದರೆ, ಮೊದಲ ಹಂತದಲ್ಲಿ 2 ಸಾವಿರ ಕೋಟಿ ರೂ., ಎರಡನೆ ಹಂತದಲ್ಲಿ 1800 ಕೋಟಿ ರೂ.ಗಳ ಟೆಂಡರ್‌ಗಳನ್ನು ಕರೆಯುವ ಅಗತ್ಯವೇನಿತ್ತು. ಒಂದೇ ಬಾರಿ 3800 ಕೋಟಿ ರೂ.ಗಳ ಟೆಂಡರ್ ಯಾಕೆ ಕರೆಯಲಿಲ್ಲ ಎಂದು ಶೆಟ್ಟರ್ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ, ಯುಪಿಎ ಸರಕಾರದ ಅವಧಿಯಲ್ಲಿ ಸಿಆರ್‌ಎಫ್ ಅಡಿಯಲ್ಲಿ 1000 ಕೋಟಿ ರೂ.ರಾಜ್ಯಕ್ಕೆ ಮಂಜೂರಾಗಿತ್ತು. ಅದನ್ನು ಕೇವಲ 5 ಜನ ಕೇಂದ್ರ ಸಚಿವರು ತಮ್ಮ ತಮ್ಮ ಕ್ಷೇತ್ರಗಳಿಗೆ ಹಂಚಿಕೊಂಡರು. ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರಕ್ಕೆ 480 ಕೋಟಿ ರೂ.ಗಳು ಬಂದಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News