ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ ಐವರನ್ನು ಕೊಂದ ಅಪರಾಧಿ

Update: 2018-02-22 15:13 GMT

ಚಾಮರಾಜನಗರ, ಫೆ.22: ಐವರನ್ನು ಅಮಾನುಷವಾಗಿ ಹತ್ಯೆ ಮಾಡಿದ್ದ ಅಪರಾಧಿಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿಯುವ ಮೂಲಕ ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಮನ್ನಣೆ ಬಂದಂತಾಗಿದೆ. ಈ ನಡುವೆ ಗಲ್ಲು ಶಿಕ್ಷೆ ರದ್ದುಗೊಳಿಸುವಂತೆ ಆರೋಪಿ ಸುಪ್ರಿಂ ಕೋರ್ಟ್‌ಗೆ ಮನವಿ ಮಾಡಿದ ಘಟನೆ ವರದಿಯಾಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದ ತೋಟದ ಮನೆಯಲ್ಲಿ 2015 ಮೇ 11ರ ನಡುರಾತ್ರಿ ಐವರನ್ನು ಅಮಾನುಷವಾಗಿ ಕೊಚ್ಚಿ ಕೊಂದ ಅಪರಾಧಿ ಮುರುಗೇಶನ್‌ಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ. ಚಾಮರಾಜನಗರ ಜಿಲ್ಲಾ ನ್ಯಾಯಾಲಯವು ಹತ್ಯಾಕಾಂಡದ ಪ್ರಮುಖ ಅಪರಾಧಿ ಮುರುಗೇಶ್‌ನಿಗೆ ಕಳೆದ ವರ್ಷ ಜು.18ರಂದು ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತು.

ಆದರೆ ಗಲ್ಲು ಶಿಕ್ಷೆಗೆ ಒಳಗಾದ ಮುರುಗೇಶ್ ತನಗೆ ನ್ಯಾಯಾಲಯ ವಿಧಿಸಿದ ಗಲ್ಲು ಶಿಕ್ಷೆಯನ್ನು ರದ್ದು ಪಡಿಸುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದನು. ಆದರೆ, ಹೈ ಕೋರ್ಟ್ ಕೂಡ ಮುರುಗೇಶನ್‌ಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು.

ಹೈಕೋರ್ಟ್‌ನಲ್ಲಿ ತನಗೆ ನ್ಯಾಯ ಸಿಗಲಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಮುರುಗೇಶನ್ ಪರ ವಕೀಲರು ಮನವಿ ಸಲ್ಲಿಸಿ ಗಲ್ಲು ಶಿಕ್ಷೆಯನ್ನು ತಡೆ ಹಿಡಿಯುವಂತೆ ವಕಾಲತು ಸಲ್ಲಿಸಿದ್ದಾರೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮುರುಗೇಶನ್ ಪರ ವಕೀಲರು ಸಲ್ಲಿಸಿರುವ ಮನವಿಯನ್ನು ಪುರಸ್ಕರಿಸಿರುವ ಸುಪ್ರಿಂ ಕೋರ್ಟ್ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಿದೆ.

ಸುಪ್ರಿಂ ಕೋರ್ಟ್‌ನಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ಹರಳೆ ಗ್ರಾಮದ ಹತ್ಯಾಕಾಂಡದ ಸಂಪೂರ್ಣ ವಿವರ, ಸಾಕ್ಷಿ ಹಾಗೂ ವಿಚಾರಣೆ ಮತ್ತು ನ್ಯಾಯಾಲಯದ ಆದೇಶ ಪ್ರತಿಗಳನ್ನು ಕಳುಹಿಸುವಂತೆ ಸೂಚನೆ ಬಂದಿದ್ದರಿಂದ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸುಪ್ರಿಂ ಕೋರ್ಟ್‌ಗೆ ಎಲ್ಲ ದಾಖಲಾತಿಗಳನ್ನು ಕಳುಹಿಸಿಕೊಡಲಿದ್ದಾರೆ.

ಸುಪ್ರಿಂ ಕೋರ್ಟ್‌ನಲ್ಲಿ ಗಲ್ಲು ಶಿಕ್ಷೆಯ ವಿಚಾರಣೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಆರೋಪಿ ಮುರುಗೇಶನ್‌ಗೆ ಕೊಂಚ ರಿಲೀಫ್ ಸಿಕ್ಕಿದಂತಾಗಿದೆ. ವಿಚಾರಣೆ ಮುಗಿದ ಬಳಿಕ ಸುಪ್ರಿಂ ಕೋರ್ಟ್ ಯಾವ ರೀತಿ ತೀರ್ಪು ಪ್ರಕಟಿಸಲಿದೆ ಎಂದು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News