×
Ad

ಬಿಐಎನಲ್ಲಿ ಅವ್ಯವಹಾರ, ಲೋಕಾಯುಕ್ತಕ್ಕೆ ದೂರು

Update: 2018-02-22 23:35 IST

ಬೆಂಗಳೂರು, ಫೆ.22: ಬೊಮ್ಮಸಂದ್ರ ಇಂಡಸ್ಟ್ರೀಸ್ ಅಸೋಸಿಯೇಶನ್(ಬಿಐಎ)ನಲ್ಲಿ ನಡೆದಿರುವ ಅವ್ಯವಹಾರ ಕುರಿತು ದೂರು ನೀಡಿದ್ದರೂ ತನಿಖೆ ನಡೆಸಿಲ್ಲ ಎಂದು ಆರೋಪಿಸಿ ಹೆಬ್ಬಗೋಡಿ ಪೊಲೀಸರು ಹಾಗೂ ಸಹಕಾರಿ ಸಂಘಗಳ ಉಪ ನೋಂದಣಾಧಿಕಾರಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೇನೆ ಎಂದು ಬಿಐಎ ಅಧ್ಯಕ್ಷ ದಯಾನಂದ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಐಎ ಸದಸ್ಯರಾಗಿದ್ದ ನರೇಂದ್ರ ಕುಮಾರ ಹಾಗೂ ಪ್ರಸಾದ್ ಎಂಬುವರು ಅಸೋಸಿಯೇಶನ್‌ಗೆ ಸೇರಿದ 1 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬೊಮ್ಮಸಂದ್ರ ಇಂಡಸ್ಟ್ರೀಸ್ ಅಸೋಸಿಯೇಶನ್‌ಗೆ ಎರಡು ವರ್ಷಗಳಿಗೊಮ್ಮೆ ಚುನಾವಣೆ ನಡೆಸಲಾಗುತ್ತದೆ. 2016 ರಲ್ಲಿ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದೆ. ಅಸೋಸಿಯೇಶನ್‌ನ ಕೆಲ ಅಭಿವೃದ್ಧಿ ಕಾರ್ಯಗಳಿಗಾಗಿ ಕೆನರಾ ಬ್ಯಾಂಕ್ ಖಾತೆಯಲ್ಲಿ 2.5 ಕೋಟಿ ರೂ. ಠೇವಣಿ ಇಡಲಾಗಿತ್ತು. ಆದರೆ, ಅಸೋಸಿಯೇಶನ್ ಸದಸ್ಯ ನರೇಂದ್ರಕುಮಾರ್ ಮತ್ತು ಪ್ರಸಾದ್ ಎಂಬುವರು ಈ ಹಣವನ್ನು ದೋಚಲು ಸಂಚು ರೂಪಿಸಿದ್ದರು.

ಸದಸ್ಯದಲ್ಲೇ ಅಸೋಸಿಯೇಶನ್ ಚುನಾವಣೆ ನಡೆಯುವುದಿಲ್ಲ ಎಂಬುದನ್ನು ಅರಿತು ಉಪ ನೋಂದಣಾಧಿಕಾರಿ ಡಾ.ಅಶ್ವತ್ಥ್‌ನಾರಾಯಣ ಅವರಿಗೆ ಹಣದ ಆಮಿಷವೊಡ್ಡಿ ಅಸೋಸಿಯೇಶನ್ ಚುನಾವಣೆ ನಡೆಸುವುದಾಗಿ ನೋಟಿಸ್ ಜಾರಿ ಮಾಡಿಸಿದ್ದರು ಎಂದು ದೂರಿದರು.
ಕೆಲ ದಿನಗಳ ಬಳಿಕ ಈ ವಿಚಾರ ನನ್ನ ಗಮನಕ್ಕೆ ಬಂದಿತ್ತು. ತಕ್ಷಣ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಅಸೋಸಿಯೇಶನ್‌ಗೆ ಯಾವುದೇ ಚುನಾವಣೆ ನಡೆಸದಂತೆ ತಡೆಯಾಜ್ಞೆ ತರಲಾಗಿತ್ತು. ಇದಾದ ಬಳಿಕ ನರೇಂದ್ರಕುಮಾರ್ ಮತ್ತು ಪ್ರಸಾದ್ ಕೆಲ ದಾಖಲೆಗಳಿಗೆ ನಕಲಿ ಸಹಿ ಮಾಡಿ 2017ರ ಎಪ್ರಿಲ್‌ನಲ್ಲಿ ಮತ್ತೆ ಅಸೋಸಿಯೇಶನ್ ಚುನಾವಣೆ ನಡೆಸಲು ಪ್ರಯತ್ನಿಸಿದ್ದರು. ಇದಕ್ಕೂ ನ್ಯಾಯಾಲಯ ತಡೆ ನೀಡಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ತಿಳಿಸಿದರು.

ಅಲ್ಲದೇ ನರೇಂದ್ರಕುಮಾರ್ ಮತ್ತು ಪ್ರಸಾದ್ ಅಸೋಸಿಯೇಶನ್‌ನ ಮುಖ್ಯಸ್ಥರಾಗಿರುವುದಾಗಿ ನಕಲಿ ದಾಖಲೆ ತಯಾರಿಸಿ ರಿಜಿಸ್ಟ್ರಾರ್ ಅಶ್ವತ್‌ನಾರಾಯಣ್‌ಗೆ ನೀಡಿದ್ದರು. ಪ್ರಕರಣವಿನ್ನೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ ಎಂದು ತಿಳಿದಿದ್ದರೂ ಹಣದ ಆಮಿಷಕ್ಕೊಳಗಾಗಿ ರಿಜಿಸ್ಟ್ರಾರ್ ಈ ಇಬ್ಬರನ್ನು ಅಸೋಸಿಯೇಶನ್ ಮುಖ್ಯಸ್ಥರು ಎಂಬುದನ್ನು ದೃಢಪಡಿಸಿ ದಾಖಲೆ ನೀಡಿದ್ದರು. ಈ ದಾಖಲೆಗಳನ್ನು ಬೊಮ್ಮಸಂದ್ರದಲ್ಲಿರುವ ಕೆನರಾ ಬ್ಯಾಂಕ್‌ಗೆ ನೀಡಿದ್ದ ಆರೋಪಿಗಳು ಅಸೋಸಿಯೇಶನ್ ಚುನಾವಣೆ ನಡೆದು ಅಧ್ಯಕ್ಷರು ಮತ್ತು ಸದಸ್ಯರು ಬದಲಾಗಿದ್ದಾರೆಂದು ನಕಲಿ ಪಟ್ಟಿ ತೋರಿಸಿ, ಬ್ಯಾಂಕ್ ಖಾತೆಯಲ್ಲಿದ್ದ 1 ಕೋಟಿ ರೂ. ಹಣ ಡ್ರಾ ಮಾಡಿಕೊಂಡು ಬೇನಾಮಿ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News