ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮತ್ತೆ ಚಟುವಟಿಕೆಗೆ?

Update: 2018-02-22 18:09 GMT
ಫೈಲ್ ಚಿತ್ರ

ಶಿವಮೊಗ್ಗ, ಫೆ.22: ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರವು ದಿನಕ್ಕೊಂದು ತಿರುವು ಪಡೆದುಕೊಳ್ಳಲಾರಂಭಿಸಿದೆ. ಕೆ.ಎಸ್. ಈಶ್ವರಪ್ಪಗೆ ಟಿಕೆಟ್ ತಪ್ಪಿಸಲು ಯತ್ನಿಸುತ್ತಿರುವ ಬೆಳವಣಿಗೆಗಳಿಂದ ಅಸಮಾಧಾನಗೊಂಡಿರುವ ಬೆಂಬಲಿಗರು, ಅವರ ಪರವಾಗಿ ಬ್ಯಾಟಿಂಗ್ ನಡೆಸಲು ನಿರ್ಧರಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗೆ ಮತ್ತೆ ಚಾಲನೆ ನೀಡಲು ನಿರ್ಧರಿಸಿದ್ದಾರೆಂಬ ಮಾಹಿತಿ ಕೇಳಿಬಂದಿದೆ. ಫೆ.26ರಂದು ಬೆಂಗಳೂರಿನಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆ ಆಯೋಜಿಸಲು ಕೆಎಸ್‌ಈ ಬೆಂಬಲಿಗರು ನಿರ್ಧರಿಸಿದ್ದಾರೆಂಬ ಎಂಬ ಮಾಹಿತಿ ಕೇಳಿಬಂದಿದೆ. ಈ ಸಭೆಗೆ ಕೆಎಸ್‌ಈಗೂ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಭೆಯ ಮೂಲಕ ಬಿಎಸ್‌ವೈಗೆ ತಕ್ಕ ತಿರುಗೇಟು ನೀಡಲು ಬೆಂಬಲಿಗರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಆದರೆ ಬ್ರಿಗೇಡ್ ಸಭೆ ಆಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ. ಬ್ರಿಗೇಡ್ ಮೂಲಗಳಿಂದಲೂ ಅಧಿಕೃತ ವಿವರ ಸಿಗುತ್ತಿಲ್ಲ. ಇದರಿಂದ ಸಭೆ ಆಯೋಜನೆಯ ಬಗ್ಗೆ ಸಾಕಷ್ಟು ಗೊಂದಲ ಮನೆ ಮಾಡುವಂತಾಗಿದೆ. ಸಭೆ ನಡೆಯುವುದು ನಿಜವೇ? ಎಂಬುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ. ಹೊಗೆಯಾಡುತ್ತಿದೆ ಭಿನ್ನಮತ?: ಇತ್ತೀಚೆಗೆ ಶಿವಮೊಗ್ಗ ನಗರದ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೆಲ ನಾಯಕರು ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ನೀಡಬಾರದು. ಅವರಿಗೆ ಟಿಕೆಟ್ ನೀಡಿದರೆ ಠೇವಣಿಯೂ ಸಿಗುವುದಿಲ್ಲ ಎಂಬಿತ್ಯಾದಿಯಾಗಿ ಟೀಕಾಪ್ರಹಾರ ನಡೆಸಿದ್ದರು. ಪಕ್ಷದ ಜಿಲ್ಲಾಧ್ಯಕ್ಷ ರುದ್ರೇಗೌಡರಿಗೆ ಟಿಕೆಟ್ ನೀಡಬೇಕು ಎಂದು ಬಿಎಸ್‌ವೈಗೆ ಒತ್ತಾಯಿಸಿದ್ದರು. ಸಭೆ ನಡೆದ ಮಾರನೆದಿನವೇ ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೆಎಸ್‌ಈ, ತಮ್ಮ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಕಣ್ಣೀರಿಟ್ಟಿದ್ದರು. ಮತ್ತೊಂದೆಡೆ ಅವರ ಬೆಂಬಲಿಗರು ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಕೂಡ ನಡೆಸಿದ್ದರು.

ಕೆಎಸ್‌ಈಗೆ ಟಿಕೆಟ್ ನೀಡಬೇಕು. ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಾಯಕರನ್ನು ಉಚ್ಚಾಟಿಸಬೇಕು ಎಂದು ಒತ್ತಾಯಿಸಿದ್ದರು. ಈ ಪ್ರಕರಣದ ನಂತರ ಬಿಎಸ್‌ವೈ ಹಾಗೂ ಕೆಎಸ್‌ಈ ಬಣಗಳ ನಡುವಿನ ರಾಜಕಾರಣ ತೀವ್ರಗೊಳ್ಳುವಂತೆ ಮಾಡಿತ್ತು. ಕಮಲ ಪಾಳಯದಲ್ಲಿ ಮತ್ತೆ ಭಿನ್ನಮತದ ಹೊಗೆಯಾಡುವಂತೆ ಮಾಡಿತ್ತು.

ಅಸಮಾಧಾನ: ಶತಾಯಗತಾಯ ಈ ಬಾರಿಯ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧಿಸಲು ಕೆಎಸ್‌ಈ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಕಲ ತಯಾರಿ ಮಾಡಿಕೊಂಡು ಬಂದಿದ್ದಾರೆ. ನಾನಾ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಮತದಾರರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರ ಮನೆಗಳಿಗೆ ಭೇಟಿಯಿತ್ತು ಸಮಾಲೋಚನೆ ನಡೆಸುತ್ತಿದ್ದಾರೆ.

ಈ ನಡುವೆ ಬಿಎಸ್‌ವೈ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು ಅವರಿಗೆ ಟಿಕೆಟ್ ನೀಡದಂತೆ ಬಹಿರಂಗವಾಗಿ ಲಾಬಿ ನಡೆಸಲಾರಂಭಿಸಿದ್ದು, ಕೆಎಸ್‌ಈ ಅಸಮಾಧಾನಕ್ಕೆ ಕಾರಣವಾಗಿದೆ. ತಮಗೆ ಟಿಕೆಟ್ ತಪ್ಪಿಸಿ, ಬೆಂಬಲಿಗ ರುದ್ರೇಗೌಡಗೆ ಮಣೆ ಹಾಕಲು ಯತ್ನಿಸುತ್ತಿರುವ ಬಿಎಸ್‌ವೈ ನಡೆಯಿಂದ ಕೆಎಸ್‌ಈ ಆಕ್ರೋಶಗೊಂಡಿದ್ದಾರೆ.

ಬಿಎಸ್‌ವೈಗೆ ತಕ್ಕ ಪ್ರತ್ಯುತ್ತರ ನೀಡಲು ಕಾರ್ಯತಂತ್ರ ರೂಪಿಸಿರುವ ಕೆಎಸ್‌ಈ, ಬಿಎಸ್‌ವೈ ಮೇಲಿನ ಮುನಿಸನ್ನು ಪಕ್ಷದ ರಾಷ್ಟ್ರೀಯ ಮುಖಂಡರಿಗೆ ತೋರ್ಪಡಿಸುವ ಉದ್ದೇಶದಿಂದಲೇ ಇತ್ತೀಚೆಗೆ ಮೈಸೂರಿನಲ್ಲಿ ನರೇಂದ್ರ ಮೋದಿ ಭಾಗವಹಿಸಿದ್ದ ಬಿಜೆಪಿ ಸಮಾವೇಶಕ್ಕೆ ಗೈರು ಹಾಜರಾಗಿದ್ದರು ಎಂದು ಹೇಳಲಾಗುತ್ತಿದೆ.

ಬ್ರಿಗೇಡ್ ಪಾಲಿಟಿಕ್ಸ್:

ಪಕ್ಷದ ರಾಷ್ಟ್ರೀಯ ವರಿಷ್ಠರ ಮಧ್ಯ ಪ್ರವೇಶದಿಂದ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಯಿಂದ ಕೆಎಸ್‌ಈ ಹಿಂದೆ ಸರಿದಿದ್ದರು. ಅವರು ಹಿಂದೆ ಸರಿಯುತ್ತಿದ್ದಂತೆ ಬ್ರಿಗೇಡ್ ಚಟುವಟಿಕೆ ಕೂಡ ಕಡಿಮೆಯಾಗಿತ್ತು. ಇದೀಗಕೆಎಸ್‌ಈ ಬೆಂಬಲಿಗರು ಬ್ರಿಗೇಡ್ ಚಟುವಟಿಕೆಗೆ ಮತ್ತೆ ಚಾಲನೆ ನೀಡಲು ಮುಂದಾಗಿದ್ದಾರೆಂಬ ವಿಷಯವು ಕಮಲ ಪಾಳಯದಲ್ಲಿ ವ್ಯಾಪಕ ಚರ್ಚೆಗೀಡು ಮಾಡಿದೆ. ಬ್ರಿಗೇಡ್ ಪಾಲಿಟಿಕ್ಸ್ ಪುನಾರಂಭವಾಗಲಿದೆಯೇ? ಇಲ್ಲವೇ? ಬಿಎಸ್‌ವೈ- ಕೆಎಸ್‌ಈ ನಡುವೆ ಮತ್ತೊಂದು ಸುತ್ತಿನ ಹಣಾಹಣಿ ಏರ್ಪಡಲಿದೆಯೇ? ಇಲ್ಲ, ಎಲ್ಲವೂ ಸರಿಯಾಗಲಿದೆಯಾ? ಎಂಬುದು ಇಷ್ಟರಲ್ಲಿಯೇ ಸ್ಪಷ್ಟವಾಗಲಿದೆ.

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News