ಮಡಿಕೇರಿ: ಬೊಟ್ಲಪ್ಪ ಯುವಕ ಸಂಘದ ಬೆಳ್ಳಿ ಮಹೋತ್ಸವಕ್ಕೆ ಚಾಲನೆ
ಮಡಿಕೇರಿ,ಫೆ.23 : ಕಡಗದಾಳು ಗ್ರಾಮದ ಶ್ರೀ ಬೊಟ್ಲಪ್ಪ ಯುವಕ ಸಂಘದ ಬೆಳ್ಳಿ ಹಬ್ಬದ ಸಂಬ್ರಮಕ್ಕೆ ಚಾಲನೆ ಸಿಕ್ಕಿದೆ. ಬೆಳ್ಳಿ ಬೆಳಕು ಹೆಸರಿನಡಿ ಎರಡು ದಿನ ಕಾಲ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಬೆಳ್ಳಿ ಹಬ್ಬದ ಅಂಗವಾಗಿ ಶುಕ್ರವಾರ ಜಿಲ್ಲಾಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಕಡಗದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆದ ಪಂದ್ಯಾವಳಿಗೆ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಚಾಲನೆ ನೀಡಿ, ಕಾರ್ಯಕ್ರಮಕ್ಕೆ ಶುಭಕೋರಿದರು.
ಮುಖ್ಯ ಅತಿಥಿಯಾಗಿದ್ದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರತಿಕುಮಾರಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡು ಬೆಳ್ಳಿಹಬ್ಬ ಆಚರಿಸುತ್ತಿರುವುದು ಸಂತಸದ ವಿಚಾರ. ಸಂಘದ ಜನೋಪಯೋಗಿ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.
ಬೆಳ್ಳಿಮಹೋತ್ಸವ ಆರ್ಥಿಕ ಸಮಿತಿ ಸಂಚಾಲಕ ಬಿ.ಡಿ. ನಾರಾಯಣ ರೈ, ಸಲಹಾ ಸಮಿತಿ ಸದಸ್ಯರಾದ ಕಿಶೋರ್ ರೈ ಕತ್ತಲೆಕಾಡು, ಎನ್.ಸಿ. ಸುನೀಲ್, ಕಾರ್ನರ್ ಫ್ರೆಂಡ್ಸ್ ನ ಸದಸ್ಯ ಜಲೀಲ್ ಇದ್ದರು. ಅವಿನಾಶ್ ಸ್ವಾಗತಿಸಿದರು. ದೇವಾನಂದ ವಂದಿಸಿದರು. ಬಿ.ಎಸ್. ಜಯಪ್ಪ ನಿರೂಪಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ ಮುಕ್ತ ರಸ್ತೆ ಓಟ ಸ್ಪರ್ಧೆ ಆಯೋಜಿಸಲಾಗಿತ್ತು. ನೀರುಕೊಲ್ಲಿಯಿಂದ ಆರಂಭವಾದ ಓಟಕ್ಕೆ ಕಡಗದಾಳು ಗ್ರಾಪಂ ಸದಸ್ಯ ರಮೇಶ್ ಆಚಾರಿ ಚಾಲನೆ ನೀಡಿದರು. ತುರ್ಕರಹಟ್ಟಿವರೆಗೆ ಸಾಗಿ ಕಡಗದಾಳು ಶಾಲೆ ಬಳಿ ಕೊನೆಗೊಂಡ 5 ಕಿ.ಮೀ. ಓಟದಲ್ಲಿ ಹಾಕತ್ತೂರು ಗ್ರಾಮದ ಟಿ.ಎಲ್. ದಿಲೀಪ್(ಪ್ರ), ಬೆಟ್ಟಗೇರಿಯ ಪಿ.ಎ. ವಿಕಾಸ್(ದ್ವಿ), ಕುಶಾಲನಗರದ ಚಾಮೆರ ನಿಖಿಲ್(ತೃ) ಸ್ಥಾನ ಗಳಿಸಿದರು. ಬಳಿಕ ಗ್ರಾಮಸ್ಥರಿಗೆ ವಿವಿಧ ಕ್ರೀಡಾಕೂಟ ಜರುಗಿತು. ಶನಿವಾರ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಲಿದ್ದಾರೆ.
ಶನಿವಾರದ ಕಾರ್ಯಕ್ರಮ
ಸಂಜೆ 4 ಗಂಟೆಗೆ ಕಡಗದಾಳು-ಬೋಯಿಕೇರಿ ರಸ್ತೆಯಿಂದ ಕಲಾತಂಡಗಳ ಮೆರವಣಿಗೆ ನಡೆಯಲಿದೆ. ಮೆರವಣಿಗೆಯ ಉದ್ಘಾಟನೆಯನ್ನು ಬೆಳ್ಳಿ ಮಹೋತ್ಸವ ಆರ್ಥಿಕ ಸಮಿತಿಯ ಸಂಚಾಲಕರಾದ ಬಿ.ಡಿ. ನಾರಾಯಣ ರೈ ಮಾಡಲಿದ್ದಾರೆ. ಟಿ.ಆರ್. ವಾಸು, ಎಂ.ಸಿ. ಸೋಮಯ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ.
ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾಡಲಿದ್ದು, ಕಡಗದಾಳು ಗ್ರಾಪಂ ಉಪಾಧ್ಯಕ್ಷರಾದ ಎಂ.ಪಿ. ತಿಮ್ಮಯ್ಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಎಂ.ಎಲ್.ಸಿ ವೀಣಾ ಅಚ್ಚಯ್ಯ ಸ್ಮರಣ ಸಂಚಿಕೆಯ ಮುಖಪುಟ ಅನಾವರಣ ಮಾಡಲಿದ್ದಾರೆ. ಟಿ.ಪಿ. ರಮೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಶಾಸಕ ಕೆ.ಜಿ. ಬೋಪಯ್ಯ. ಎಂಎಲ್ಸಿ ಎಂ.ಪಿ. ಸುನೀಲ್ ಸುಬ್ರಹ್ಮಣಿ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.