ಮುಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಫೆ.26ಕ್ಕೆ ಮುಂದೂಡಿಕೆ
ಬೆಂಗಳೂರು, ಫೆ.23: ವಿದ್ವತ್ ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಂತಿ ನಗರ ಶಾಸಕ ಎನ್.ಎ.ಹಾರೀಸ್ ಪುತ್ರ ಮುಹಮ್ಮದ್ ನಲಪಾಡ್ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು ಬೆಂಗಳೂರಿನ 63ನೇ ಸೆಷನ್ಸ್ ನ್ಯಾಯಾಲಯವು ಫೆ.26ಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ ಮೂರನೇ ವ್ಯಕ್ತಿಯ ವಾದ ಆಲಿಸಬೇಕೇ , ಬೇಡವೇ ಎನ್ನುವ ವಿಚಾರದ ಬಗ್ಗೆ ನ್ಯಾಯಾಲಯ ಶನಿವಾರ ಆದೇಶ ನೀಡಲಿದೆ. ಅರ್ಜಿಗೆ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಲು ಫೆ.26ರ ತನಕ ಕಾಲಾವಕಾಶವನ್ನು ನ್ಯಾಯಾಲಯ ನೀಡಿದೆ. ವಿಶೇಷ ಸರಕಾರಿ ಅಭಿಯೋಜಕರಾದ(ಎಸ್ ಪಿಪಿ) ಶ್ಯಾಮ್ ಸುಂದರ್ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
"ವಿದ್ವತ್ ಸ್ಥಿತಿ ಗಂಭೀರವಾಗಿದೆ ಮೂಗಿಗೆ ಗಾಯವಾಗಿದೆ, ಪಕ್ಕೆಲುಬು ಮುರಿದಿದೆ. ಗಾಯಾಳು ವಿದ್ವತ್ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ವೈದ್ಯರು ಹೇಳಿಕೆ ಪಡೆಯಲು ಅವಕಾಶ ನೀಡಿಲ್ಲ. ಆರೋಪಿ ಮುಹಮ್ಮದ್ ನಲಪಾಡ್ ಗೆ ಜಾಮೀನು ನೀಡಿದರೆ ಜೈಲಿನಿಂದ ಹೊರಬಂದು ಹಣ ಮತ್ತು ರಾಜಕೀಯ ಬಲದಿಂದ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ. ಆತನ ಅರ್ಜಿ ಕಾನೂನು ರೀತಿಯಲ್ಲಿ ಊರ್ಜಿತವಾಗಿಲ್ಲ " ಎಂದು ಸರಕಾರಿ ಅಭಿಯೋಜಕರು ವಾದ ಮಂಡಿಸಿದರು.