×
Ad

ತುಮಕೂರು: ಅನರ್ಹರಿಗೆ ಜಾಬ್ ಕಾರ್ಡ್ ವಿತರಕರ ವಿರುದ್ಧ ಕ್ರಮಕ್ಕೆ ಸುಭಾಷ್ ಅಡಿ ಸೂಚನೆ

Update: 2018-02-23 17:45 IST

ತುಮಕೂರು,ಫೆ.23: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೊಪ್ಪ ಗ್ರಾಮ ಪಂಚಾಯತ್ ನಲ್ಲಿ ನರೇಗಾ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರೆ ಅನರ್ಹರಿಗೆ ಜಾಬ್ ಕಾರ್ಡ್ ವಿತರಿಸಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಉಪ ಲೋಕಾಯುಕ್ತ ಸುಭಾಷ್ ಬಿ.ಆಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತುಮಕೂರು ನಗರದ ಬಾಲಭವನದಲ್ಲಿ ಹಮ್ಮಿಕೊಂಡಿದ್ದ, ಲೋಕಾಯುಕ್ತ ಪ್ರಕರಣಗಳ ವಿಚಾರಣೆ ನಡೆಸಿದ ಅವರು, ಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಜಾಬ್ ಕಾರ್ಡ್‍ಗಳನ್ನು ಅನರ್ಹರಿಗೆ ವಿತರಿಸಿರುವುದು ಹಾಗೂ ಜಾಬ್ ಕಾರ್ಡ್ ಪಟ್ಟಿಯಲ್ಲಿ ನಕಲಿ ಹೆಸರುಗಳು ಮತ್ತು ಸಹಿಗಳು ಇರುವುದನ್ನು ಮೇಲ್ನೋಟಕ್ಕೆ ಗುರುತಿಸಿದ ಉಪಲೋಕಾಯುಕ್ತರು ಕೂಡಲೇ ಈ ಬಗ್ಗೆ ಕ್ರಿಮಿನಲ್ ಮೊಕದ್ದಮೆ ಹೂಡುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು. 

ಇದೇ ಗ್ರಾಮ ಪಂಚಾಯತ್ ನಲ್ಲಿ ವಿವಿಧ ವಸತಿ ಮತ್ತು ನಿವೇಶನಗಳ ಮಂಜೂರಾತಿಯಲ್ಲಿ ಒಬ್ಬನೇ ವ್ಯಕ್ತಿಯ ಹೆಸರಲ್ಲಿ ಒಂದಕ್ಕಿಂತಲೂ ಹೆಚ್ಚು ನಿವೇಶನ, ಮನೆಗಳನ್ನು ಮಂಜೂರು ಮಾಡಿರುವುದು ಗ್ರಾಮಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಲ್ಲಿಸಿದ ದಾಖಲೆಗಳಿಂದ ಸಾಬೀತಾಗಿರುವುದರಿಂದ ಈ ಬಗ್ಗೆ ಸಹ ಸೂಕ್ತ ತನಿಖೆ ಮಾಡುವಂತೆ ಸ್ಥಳದಲ್ಲಿ ಹಾಜರಿದ್ದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು. 

ಗುಬ್ಬಿ ತಾಲೂಕಿನ ಕೆಲವೆಡೆಗಳಲ್ಲಿ ಸರಕಾರಿ ಗೋಮಾಳ, ಗುಂಡು ತೋಪುಗಳಲ್ಲಿ ಅಕ್ರಮವಾಗಿ ಈಗಾಗಲೇ ಮನೆಗಳನ್ನು ಕಟ್ಟಿಕೊಂಡಿದ್ದು, ಇಂತಹ ಮನೆಗಳು ಸರಕಾರದ ಯಾವುದೇ ಮಂಜೂರಾತಿ ಅಥವಾ ಗ್ರಾಂಟ್ ಇಲ್ಲದೆ ನಿರ್ಮಿಸಿರುವುದು ಕಂಡು ಬಂದಿದ್ದು, ಇದೇ ರೀತಿ ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. 

ಗುಬ್ಬಿ ಪಟ್ಟಣದಲ್ಲಿ ಇರುವ ಬಡಾವಣೆಯೊಂದು ಸರಕಾರದ ನಗರ ಯೋಜನಾಧಿಕಾರಿಗಳಿಂದ ಯಾವುದೇ ಪರವಾನಗಿ ಪಡೆಯದೆ ಅನಧಿಕೃತವಾಗಿ ರಚನೆಯಾಗಿದ್ದು,ಈ ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಗುಬ್ಬಿ ಪಟ್ಟಣ ಪಂಚಾಯತ ನವರು ಸಾರ್ವಜನಿಕ ಹಣವನ್ನು ಬಳಸುತ್ತಿರುವ ಬಗ್ಗೆ ಗಮನ ಹರಿಸಿದ ಉಪಲೋಕಾಯುಕ್ತರು, ಕೂಡಲೇ ಬಡಾವಣೆಗೆ ಒದಗಿಸುತ್ತಿರುವ ಮೂಲಭೂತ ಸೌಲಭ್ಯಗಳನ್ನು ತಡೆಹಿಡಿದು, ನಗರ ಯೋಜನಾ ಇಲಾಖೆಯ ನಿರ್ದೇಶನದಂತೆ ಕೂಡಲೇ ಬಡಾವಣೆಯಲ್ಲಿ ಈಗಾಗಲೇ ಮನೆ ಕಟ್ಟಿಕೊಂಡಿರುವವರ ಬಳಿ ದಂಡ ರೂಪದ ಶುಲ್ಕವನ್ನು ಸಂಗ್ರಹಿಸಿ ನಂತರ ಬಡಾವಣೆಯ ಅಭಿವೃದ್ಧಿಗೆ ಮುಂದಾಗಬೇಕೆಂದು ಸೂಚಿಸಿದರು. 

ಗುಬ್ಬಿ ತಾಲೂಕಿನ ಒಟ್ಟು 15 ಪ್ರಕರಣಗಳಿಗೆ ಇಂದು ಪರಿಹಾರ ನೀಡಲಾಯಿತು.ಇಂದಿನ ಲೋಕಾಯುಕ್ತ ಅಧಿವೇಶನದಲ್ಲಿ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News