ನಾವೇ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮೋದಿಗೂ ಹೇಳಿದ್ದೇನೆ: ಸಿ.ಎಂ ಸಿದ್ದರಾಮಯ್ಯ
ಬೆಂಗಳೂರು, ಫೆ. 23: ‘ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರವೇ ಆಡಳಿತಕ್ಕೆ ಬರಲಿದೆ ಎಂದು ಪ್ರಧಾನಿ ಮೋದಿಯವರಿಗೆ ಖುದ್ದು ನಾನೇ ಹೇಳಿದ್ದೇನೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೇಳಿಕೆ ವಿಧಾನಸಭೆಯಲ್ಲಿ ಕೆಲಕಾಲ ಬಿಜೆಪಿ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
ಶುಕ್ರವಾರ ವಿಧಾನಸಭೆ ಆಯವ್ಯಯ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಇತ್ತೀಚೆಗೆ ಮೈಸೂರಿಗೆ ಪ್ರಧಾನಿ ಮೋದಿ ಆಗಮಿಸಿದ್ದರು. ಈ ವೇಳೆ ಪ್ರಧಾನಿ ಜತೆಗಿದ್ದ ಅನಂತಕುಮಾರ್ ಅವರಿಗೆ ನನ್ನನ್ನು ನಿಮ್ಮ (ಬಿಜೆಪಿ) ಸಮಾವೇಶಕ್ಕೆ ಕರೆದೊಯ್ಯಿರಿ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ನಾನೇ ಭಾಷಣ ಮಾಡುತ್ತೇನೆ ಎಂದು ಹೇಳಿದ್ದೆ. ಇದಕ್ಕೆ ಸಾಕ್ಷಿಯಾಗಿ ಅನಂತಕುಮಾರ್ ಇದ್ದಾರೆಂದು ಬಿಜೆಪಿ ಸದಸ್ಯರನ್ನು ಕೆಣಕಿದರು.
ಸಿಎಂ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪ್ರಧಾನಿ ಹೆಸರು ಉಲ್ಲೇಖ ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ನೀಡಬಾರದು. ಅವರು ಈ ಮನೆಯ ಸದಸ್ಯರಲ್ಲ. ನಿಮ್ಮ ಹೇಳಿಕೆಗೆ ಅವರು ಇಲ್ಲಿಗೆ ಬಂದು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
‘ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ನೀವು ಹೇಳುತ್ತಿರುವುದು ಸುಳ್ಳು ಎಂದು ಪ್ರಧಾನಿ ಮೋದಿಯವರು ನಿಮಗೆ ಹೇಳಿದ್ದರಲ್ಲ. ಅದು ನಮಗೆ ಗೊತ್ತಿದೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ, ಸಿದ್ದರಾಮಯ್ಯರವರನ್ನು ಕೆಣಕಿದರು. ಈ ವೇಳೆ ಎದ್ದುನಿಂತ ಸಿದ್ದರಾಮಯ, ನಿಮ್ಮ (ಕಾಗೇರಿ ಕುರಿತು) ಕ್ಷೇತ್ರಕ್ಕೆ ನಾನು ಬಂದಿದ್ದೇನೆ. ಅಲ್ಲಿನ ಜನ ಕಾಂಗ್ರೆಸ್ ಪಕ್ಷವನ್ನೆ ಗೆಲ್ಲಿಸುವುದಾಗಿ ಹೇಳಿದ್ದಾರೆಂದು ವಾಗ್ಬಾಣ ಬಿಟ್ಟರು.
‘ನಾನು ಮೈಸೂರಿಗೂ ಹೋಗಿ ಬಂದಿದ್ದೇನೆ. ನೀವು ಗೆಲ್ಲುವುದಿರಲಿ, ನಿಮ್ಮ ಮಗನೂ ಗೆಲ್ಲುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣಬೇಡಿ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಕಾಲೆಳೆದರು.
ಸುಳ್ಳಿನ ನಿಸ್ಸೀಮರು: ‘ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಈ ರೀತಿ ಪ್ರಧಾನಿ ಹೆಸರನ್ನು ಬಳಸಿಕೊಂಡು ಸುಳ್ಳು ಹೇಳುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಕ್ರೋಶ ಹೊರಹಾಕಿದರು. ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು.
ಈ ಹಂತದಲ್ಲಿ ಎದ್ದುನಿಂತ ಕೆಜೆಪಿ ಸದಸ್ಯ ಬಿ.ಆರ್.ಪಾಟೀಲ್, ಪ್ರಧಾನಿ ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಹಣ ಹಾಕುತ್ತೇವೆ ಎಂದು ಸುಳ್ಳು ಹೇಳಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಯಾವುದೇ ರೀತಿಯ ಸುಳ್ಳನ್ನು ಹೇಳಿಲ್ಲ ಎಂದು ಸಿಎಂ ಬೆಂಬಲಕ್ಕೆ ನಿಂತರು.
‘ಹಿಂದಿ ಭಾಷಿಕರ ಹೃದಯ ಭಾಗದ ಪ್ರದೇಶದಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಕನಸಿನ ಮಾತು. ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ’
-ಕೃಷ್ಣಬೈರೇಗೌಡ ಕೃಷಿ ಸಚಿವ