×
Ad

ಮಾರ್ಚ್ ಅಂತ್ಯದವರಿಗೆ ದ್ರಾಕ್ಷಿ-ಕಲ್ಲಂಗಡಿ ಮೇಳ: ರಾಮಲಿಂಗಾರೆಡ್ಡಿ

Update: 2018-02-23 18:36 IST

ಬೆಂಗಳೂರು, ಫೆ.23: ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣಿನ ಬೆಳೆಗಾರರನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ನಗರದ ಲಾಲ್‌ಬಾಗ್‌ನಲ್ಲಿ ಮಾರ್ಚ್ ಅಂತ್ಯದವರಿಗೆ ದ್ರಾಕ್ಷಿ-ಕಲ್ಲಂಗಡಿ ಮೇಳವನ್ನು ಆಯೋಜಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಶುಕ್ರವಾರ ಹಾಪ್‌ಕಾಮ್ಸ್ ವತಿಯಿಂದ ನಗರದ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ದ್ರಾಕ್ಷಿ-ಕಲ್ಲಂಗಡಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷದ ಮೊದಲ ಋತುಮಾನದ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಬೆಂಗಳೂರಿನ ಗ್ರಾಹಕರಿಗೆ ತಲುಪಿಸುವುದೇ ಈ ಮೇಳದ ಪ್ರಮುಖ ಉದ್ದೇಶವಾಗಿದೆ ಎಂದರು. ಮೇಳದಲ್ಲಿ ದ್ರಾಕ್ಷಿ-ಕಲ್ಲಂಗಡಿ ಹಣ್ಣುಗಳನ್ನು ಖರೀದಿಸುವ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಒಂದು ತಿಂಗಳು ನಡೆಯುವ ಮೇಳದಲ್ಲಿ 500 ಮೆಟ್ರಿಕ್ ಟನ್ ವಿವಿಧ ತಳಿಯ ದ್ರಾಕ್ಷಿ ಮತ್ತು 2000 ಟನ್ ಕಲ್ಲಂಗಡಿ ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದು ಖರೀದಿ ಮಾಡಿದರೆ, ಇದರ ಫಲ ನೇರವಾಗಿ ರೈತರಿಗೆ ತಲುಪಲಿದೆ ಎಂದು ಅವರು ತಿಳಿಸಿದರು.

ಹಾಪ್‌ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ ಮಾತನಾಡಿ, ದ್ರಾಕ್ಷಿ ಮತ್ತು ಕಲ್ಲಂಗಡಿ ಬೆಳೆಗಾರರನ್ನು ಪ್ರೋತ್ಸಾಹಿಸುವ ಸಂಸ್ಥೆ ಪ್ರತಿವರ್ಷ ನಗರದಲ್ಲಿ ಸುಮಾರು ಎರಡು ತಿಂಗಳು ಈ ಮೇಳ ನಡೆಸುತ್ತದೆ. ಥಾಮ್ಸನ್ ಸೀಡ್‌ಲಾಸ್, ಸೊನಾಕಾ ಶರದ್, ಕೃಷ್ಣ ಶರದ್, ತಾಜ್ ಎ ಗಣೇಶ್, ಇಂಡಿಯನ್ ಬ್ಲಾಕ್ ಗ್ಲೋಬ್, ರೆಡ್ ಗ್ಲೋನ್, ಫ್ಲೇಮ್ ಸೀಡ್‌ಲೆಸ್ ಸೇರಿದಂತೆ ವಿವಿಧ ಬಗೆಯ ದ್ರಾಕ್ಷಿಗಳು ಮತ್ತು ಶುಗರ್ ಬೇಬಿ, ಕಿರಣ್ ಮತ್ತು ಆರ್ಕಾ ಮಾಣಿಕ್ ಕಲ್ಲಂಗಡಿ ಹಣ್ಣುಗಳು ಮೇಳದಲ್ಲಿ ಸಿಗಲಿವೆ ಎಂದು ವಿವರಿಸಿದರು.

ವಿಜಯಪುರ, ಬಾಗಲಕೋಟೆಯಿಂದ ದ್ರಾಕ್ಷಿಗಳು ಬಂದಿದ್ದು, ಹಾಪ್‌ಕಾಮ್ಸ್ ಕೇಂದ್ರ ಮಳಿಗೆಯಲ್ಲಿ ಮಾರಾಟವಾಗುತ್ತಿವೆ. ಇದಲ್ಲದೆ, ಗದಗ, ಚಿಕ್ಕಬಳ್ಳಾಪುರ, ಕಲಬುರ್ಗಿ, ಕೋಲಾರ, ರಾಮನಗರ ಜಿಲ್ಲೆಗಳ ದ್ರಾಕ್ಷಿಯನ್ನು ಸವಿಯಬಹುದು ಎಂದು ಹೇಳಿದರು.

ಈ ವೇಳೆ ತೋಟಗಾರಿಕೆ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ವಿಶ್ವನಾಥ್, ಉಪಾಧ್ಯಕ್ಷ ಬಿ.ಮುನೇಗೌಡ, ಎನ್.ಗೋಪಾಲಕೃಷ್ಣ, ನಾಗವೇಣಿ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News