ಮಡಿಕೇರಿ: ಮಹಿಳೆಯನ್ನು ಗುಂಡಿಕ್ಕಿ ಹತ್ಯೆಗೈದು, ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಮಡಿಕೇರಿ, ಫೆ.23: ಕ್ಷುಲ್ಲಕ ಕಾರಣಕ್ಕೆ ಕಲಹ ಏರ್ಪಟ್ಟು ವ್ಯಕ್ತಿಯೊಬ್ಬ ಮಹಿಳೆಯನ್ನು ಗುಂಡಿಕ್ಕಿ ಹತ್ಯೆಗೈದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿರುವ ಘಟನೆ ಮಡಿಕೇರಿ ಸಮೀಪದ ಕಾಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚನ್ನಪಂಡ ಲಲಿತ ಯಾನೆ ಚೋಂದಮ್ಮ(42) ಹಾಗೂ ಕುಳ್ಳೋಡಂಡ ಧರ್ಮರಾಯ ಯಾನೆ ಕಾಶಿ (45) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಕೃಷಿ ಚಟುವಟಿಕೆ ನಡೆಸಿಕೊಂಡು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನೊಂದಿಗೆ ವಾಸವಿದ್ದ ಧರ್ಮರಾಯ ಹಾಗೂ ನೆರೆಮನೆಯಲ್ಲಿ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಚನ್ನಪಂಡ ಲಲಿತರ ನಡುವೆ ಕಲಹವೇರ್ಪಟ್ಟು ಈ ಘಟನೆ ನಡೆದಿದೆ.
ಶುಕ್ರವಾರ ಮಧ್ಯಾಹ್ನ, ಪತ್ನಿ ಮಡಿಕೇರಿಯ ವಾರದ ಸಂತೆಗೆ ತೆರಳಿದ್ದ ಸಂದರ್ಭ ಸಮಯ ಸಾಧಿಸಿದ ಧರ್ಮರಾಯ ಬಂದೂಕಿನೊಂದಿಗೆ ನೆರೆಮನೆಗೆ ತೆರಳಿ ಚನ್ನಪಂಡ ಲಲಿತ ಅವರೊಂದಿಗೆ ಕಲಹ ನಡೆಸಿ, ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಬಳಿಕ ತಾನೇ ತನ್ನ ಮುಖದ ಭಾಗಕ್ಕೆ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಗುಂಡೇಟಿನಿಂದ ಲಲಿತ ಸ್ಥಳದಲ್ಲೆ ಸಾವನ್ನಪ್ಪಿದರೆ, ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಧರ್ಮರಾಯ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.