×
Ad

ಶಿವಮೊಗ್ಗ: ಟಿಕೆಟ್ ನೀಡದಂತೆ ಒತ್ತಾಯಿಸಿದವರನ್ನು ಅಟ್ಟಾಡಿಸಿ ಹೊಡೆದ ಶಾಸಕರ ಬೆಂಬಲಿಗರು

Update: 2018-02-23 20:29 IST

ಶಿವಮೊಗ್ಗ, ಫೆ. 23: ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‍ಗೆ ತೀವ್ರ ಪೈಪೋಟಿ ಕಂಡುಬಂದಿದೆ. ಈ ನಡುವೆ ಶುಕ್ರವಾರ ನಗರದ ಪಿಎಲ್‍ಡಿ ಬ್ಯಾಂಕ್ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಪಕ್ಷದ ವೀಕ್ಷಕರಿಗೆ, ಶಾಸಕ ಕೆ.ಬಿ.ಪ್ರಸನ್ನಕುಮಾರ್ ಗೆ ಟಿಕೆಟ್ ನೀಡದಂತೆ ಒತ್ತಾಯಿಸಿ ಫಲಕಗಳನ್ನು ಹಿಡಿದು ಬಂದವರಿಗೆ ಶಾಸಕರ ಬೆಂಬಲಿಗರು ಅಟ್ಟಾಡಿಸಿ ಥಳಿಸಿದ ಘಟನೆ ನಡೆಯಿತು.

ಶಾಸಕರ ಬೆಂಬಲಿಗರ ದಿಢೀರ್ ದಾಳಿಯಿಂದಾಗಿ ಟಿಕೆಟ್ ನೀಡದಂತೆ ಒತ್ತಾಯಿಸುತ್ತಿದ್ದ ಗುಂಪಿನಲ್ಲಿದ್ದವರು ದಿಕ್ಕಾಪಾಲಾಗಿ ಓಡಲಾರಂಭಿಸಿದ್ದು, ಈ ವೇಳೆ ಕೆಲವರನ್ನು ಬೆನ್ನಟ್ಟಿ ಹಿಡಿದು ಥಳಿಸಿದ ಘಟನೆ ಕೂಡ ನಡೆದಿದೆ. ಹಾಗೆಯೇ ಶಾಸಕರಿಗೆ ಟಿಕೆಟ್ ನೀಡಬೇಡಿ ಎಂಬ ಘೋಷಣೆ ಒಳಗೊಂಡಿದ್ದ ಫಲಕಗಳನ್ನು ಬಲವಂತವಾಗಿ ಕಿತ್ತುಕೊಂಡ ಘಟನೆಯೂ ನಡೆಯಿತು.

ಈ ಘಟನೆಯಿಂದ ಕಚೇರಿ ಆವರಣದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಾಸಕರ ಬೆಂಬಲಿಗರು ನಡೆಸಿದ ಹಲ್ಲೆಗೆ ವಿರೋಧಿ ಬಣದವರು ಆಕ್ಷೇಪ ವ್ಯಕ್ತಪಡಿಸಿ, ಘೋಷಣೆ ಕೂಗಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಶಾಸಕರ ಬೆಂಬಲಿಗರು ಘೋಷಣೆ ಕೂಗಿದರು. ವಿಷಯ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕಚೇರಿ ಆವರಣದಲ್ಲಿ ಜಮಾಯಿಸಿದ್ದ ಕಾರ್ಯಕರ್ತರನ್ನು ಚದುರಿಸಿದರು.

ಘಟನೆಯಲ್ಲಿ ವೃದ್ದನೋರ್ವನಿಗೆ ಶಾಸಕರ ಬೆಂಬಲಿಗರು ಬಾಸುಂಡೆ ಬರುವ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ನೇತೃತ್ವದ ನಾಯಕರ ತಂಡವು ವೀಕ್ಷಕರಿಗೆ ಟಿಕೆಟ್ ಕೋರಿ ಮನವಿ ಅರ್ಪಿಸುವ ವೇಳೆ, ಅವರ ಬೆಂಬಲಿಗರು ಶಾಸಕರ ವಿರುದ್ದ ದಿಕ್ಕಾರದ ಘೋಷಣೆ ಕೂಗಿದರು. ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್ ಘೋಷಣೆ ಕೂಗದಂತೆ ಮಾಡಿಕೊಂಡ ಮನವಿಗೂ ಕಿವಿಗೊಡಲಿಲ್ಲ ಎನ್ನಲಾಗಿದೆ.

ಏನಾಯ್ತು?: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಸ್ಪರ್ಧಾಕಾಂಕ್ಷಿಗಳ ಅಹವಾಲು ಆಲಿಸಲು ಲೋಕಸಭಾ ಸದಸ್ಯ ಚಂದ್ರಪ್ಪ ನೇತೃತ್ವದ ವೀಕ್ಷಕರ ತಂಡವು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿತ್ತು. ಈ ವೇಳೆ ಗುಂಪೊಂದು ಶಾಸಕರಿಗೆ ಟಿಕೆಟ್ ನೀಡದಂತೆ ಆಗ್ರಹಿಸುವ ಘೋಷಣೆ ಒಳಗೊಂಡ ಫಲಕಗಳನ್ನು ಕೈಯಲ್ಲಿಡಿದುಕೊಂಡು ವೀಕ್ಷಕರನ್ನು ಭೇಟಿಯಾಗಲು ಕಚೇರಿಯೊಳಗೆ ಆಗಮಿಸುತ್ತಿದ್ದರು. ಈ ವೇಳೆ ಹಾಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ವೀಕ್ಷಕರಿಗೆ ಮನವಿ ಅರ್ಪಿಸಿ ಹಿಂದಿರುಗುತ್ತಿದ್ದ ಅವರ ಬೆಂಬಲಿಗರು ಫಲಕಗಳನ್ನು ನೋಡಿ ರೊಚ್ಚಿಗೆದ್ದು, ಗುಂಪಿನ ಮೇಲೆ ದಾಳಿ ನಡೆಸಿದ್ದಾರೆ. ಜೊತೆಗೆ ಫಲಕಗಳನ್ನು ಬಲವಂತವಾಗಿ ಕಿತ್ತುಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನಾಯಕರು ಯಾರು?: ಗುಂಪಿನಲ್ಲಿದ್ದ ಬಹುತೇಕರು ಕೂಲಿಕಾರ್ಮಿಕರಾಗಿದ್ದಾರೆ. ಇವರನ್ನು ಕರೆತಂದವರು ಯಾರು ಎಂಬುವುದು ಸ್ಪಷ್ಟವಾಗಿಲ್ಲ. ಇವರಿಗೆ ಹಣ ನೀಡಿ ಕರೆತರಲಾಗಿತ್ತು ಎಂಬ ಮಾಹಿತಿಯೂ ಕೇಳಿಬರುತ್ತಿದೆ. ಆದರೆ ಇವರಲ್ಲಿ ಕೆಲವರಿಗೆ ತಾವು ಕೈಯಲ್ಲಿ ಹಿಡಿದಿದ್ದ ಫಲಕದಲ್ಲಿ ಏನು ಬರೆದಿತ್ತು, ಯಾರ ಪರ - ವಿರುದ್ದವಾಗಿ ಬಂದಿದ್ದೇವೆ ಎಂಬುವುದರ ಕನಿಷ್ಠ ಮಾಹಿತಿಯೂ ಇರಲಿಲ್ಲ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News