ಶಾಸಕ ನಾರಾಯಣಸ್ವಾಮಿ ಮಂಡಿಸಿದ್ದ ಹಕ್ಕುಚ್ಯುತಿ ಪ್ರಕರಣ: ಸರಕಾರದಿಂದ ಹೊಸ ಆದೇಶ ಹೊರಡಿಸಲು ಸೂಚನೆ
ಬೆಂಗಳೂರು, ಫೆ.23: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ವೈ.ಎ. ನಾರಾಯಣಸ್ವಾಮಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ವಿಧಾನಪರಿಷತ್ ಸದಸ್ಯ ಭೈರತಿ ಸುರೇಶ್ ಸೂಚಿಸಿದ ಕಾಮಗಾರಿಗಳಿಗೆ 4 ಕೋಟಿ ರೂ.ಅನುದಾನ ಬಿಡುಗಡೆ ಮಾಡುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೊರಡಿಸಿದ್ದ ಆದೇಶವನ್ನು ಹಿಂಪಡೆದು, ಹೊಸದಾಗಿ ಆದೇಶ ಹೊರಡಿಸುವಂತೆ ಉಪಸಭಾಧ್ಯಕ್ಷ ಶಿವಶಂಕರರೆಡ್ಡಿ ಸೂಚನೆ ನೀಡಿದ್ದಾರೆ.
ಸ್ಥಳೀಯ ಶಾಸಕರನಾಗಿರುವ ನನ್ನನ್ನು ನಿರ್ಲಕ್ಷಿಸಿ ವಿಧಾನಪರಿಷತ್ ಸದಸ್ಯ ಭೈರತಿ ಸುರೇಶ್ ಸೂಚಿಸಿದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿರುವುದು ನನ್ನ ಹಕ್ಕುಚ್ಯುತಿಯಾಗಿದೆ ಎಂದು ನಾರಾಯಣಸ್ವಾಮಿ ಮಂಡಿಸಿದ ಹಕ್ಕುಚ್ಯುತಿ ಸೂಚನೆ ಹಿನ್ನೆಲೆಯಲ್ಲಿ ಅವರು ಈ ತೀರ್ಮಾನ ಪ್ರಕಟಿಸಿದರು.
ಅಲ್ಪಸಂಖ್ಯಾತರ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ರಾಜ್ಯ ಸರಕಾರ 85 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಸ್ಥಳೀಯ ಶಾಸಕನಾಗಿ ನಾನು ಇರಬೇಕಾದರೆ ವಿಧಾನಪರಿಷತ್ತಿನ ಸದಸ್ಯರು ಸೂಚಿಸುವ ಕಾಮಗಾರಿಗಳಿಗೆ 4 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪಶುಸಂಗೋಪನಾ ಸಚಿವ ಎ.ಮಂಜು, ಮೇಲ್ಮನೆ ಸದಸ್ಯರ ಹೆಸರಿನಲ್ಲಿ ಅನುದಾನ ಬಿಡುಗಡೆ ಮಾಡಿದರೆ ತಪ್ಪೇನು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್ ಮಾತನಾಡಿ, ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಚುನಾಯಿತರಾದವರಿಗೆ ನಿರ್ದಿಷ್ಟವಾದ ಕ್ಷೇತ್ರವಿರುವುದಿಲ್ಲ. ರಾಜ್ಯದ ಯಾವುದೇ ಭಾಗದಲ್ಲಿ ಬೇಕಾದರೂ ಅವರು ತಮ್ಮ ಶಾಸಕರ ನಿಧಿಯನ್ನು ಬಳಸಬಹುದಾಗಿದೆ ಎಂದರು.
ಆದರೆ, ಸ್ಥಳೀಯ ಶಾಸಕರು ಇರುವಾಗ ಸರಕಾರಿ ಕಾರ್ಯಕ್ರಮಗಳಿಗೆ ವಿಧಾನಪರಿಷತ್ ಸದಸ್ಯರು ಚಾಲನೆ ನೀಡಿದರೆ ಅದು ಶಾಸಕರ ಹಕ್ಕುಚ್ಯುತಿಯಾಗುತ್ತದೆ. ಆಡಳಿತ ಪಕ್ಷವಾಗಿ ನಾವು ಇಷ್ಟು ದುರುಪಯೋಗ ಮಾಡಿಕೊಳ್ಳದಿದ್ದರೆ ನಾವು ಯಾಕೆ ಬೇಕು ಎಂದು ರಮೇಶ್‌ಕುಮಾರ್ ವ್ಯಂಗ್ಯವಾಡಿದರು.
ಆಗ ಎದ್ದು ನಿಂತ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್ ಸದಸ್ಯರಷ್ಟೇ ಅಲ್ಲ, ಪರಾಜಿತ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳು ಮುಖ್ಯಮಂತ್ರಿ ಮೂಲಕ ಅನುದಾನಗಳನ್ನು ಮಂಜೂರು ಮಾಡಿಸಿಕೊಳ್ಳುತ್ತಿದ್ದಾರೆ. ಭೈರತಿ ಸುರೇಶ್ ಹೆಸರಿನಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಹೊರಡಿಸಿರುವ ಸರಕಾರಿ ಆದೇಶವನ್ನು ಹಿಂಪಡೆಯುವಂತೆ ಮೂರ್ನಾಲ್ಕು ದಿನಗಳಿಂದ ಆಗ್ರಹ ಮಾಡುತ್ತಿದ್ದೇವೆ ಎಂದರು.
ಆದರೆ, ಈಗ ಮುಖ್ಯಮಂತ್ರಿಗಳು ಈ ಹಿಂದೆ ಆದೇಶದಲ್ಲಿದ್ದ ನಾಲ್ಕು ಕೋಟಿ ರೂ.ಗಳನ್ನು ತಲಾ ಎರಡು ಕೋಟಿ ರೂ.ಗಳಂತೆ ಶಾಸಕ ನಾರಾಯಣಸ್ವಾಮಿ ಹಾಗೂ ಸುರೇಶ್‌ಗೆ ಹಂಚಿಕೆ ಮಾಡಿದ್ದಾರೆ. ಇದು ಕೇವಲ ಹೆಬ್ಬಾಳಕ್ಕೆ ಸೀಮಿತವಾದ ಪ್ರಕರಣವೆಂದು ಭಾವಿಸಬೇಡಿ, ಮೂಲ ಆದೇಶವನ್ನು ಹಿಂಪಡೆದು, ಹೊಸದಾಗಿ ಸರಕಾರ ಆದೇಶ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಜೀವರಾಜ್ ಹಾಗೂ ಸಚಿವ ರಮೇಶ್‌ಕುಮಾರ್ ಮಾತನಾಡಿದರು. ಅಂತಿಮವಾಗಿ ಸ್ಪೀಕರ್ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಶಿವಶಂಕರರೆಡ್ಡಿ, ಸರಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆದು, ಹೊಸದಾಗಿ ಆದೇಶ ಹೊರಡಿಸುವಂತೆ ಸೂಚಿಸಿದರು.