×
Ad

ಶಿಕ್ಷಣ ಇಲಾಖೆ ಹಾಗೂ ಸ್ಕೂಗ್‌ಲಿಂಕ್ ನಡುವಿನ ಒಪ್ಪಂದ ರದ್ದು

Update: 2018-02-23 22:19 IST

ಬೆಂಗಳೂರು, ಫೆ.23: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಖಾಸಗಿ ಸಂಸ್ಥೆ ಸ್ಕೂಗ್‌ಲಿಂಕ್ ನಡುವೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಪಡಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್.ಆರ್.ಎಸ್.ನಾಧನ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರ ವೈಯಕ್ತಿಕ ಮಾಹಿತಿ ಸೇರಿದಂತೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ದತ್ತಾಂಶವನ್ನು ಖಾಸಗಿ ಸಂಸ್ಥೆಯಾದ ಸ್ಕೂಗ್‌ಲಿಂಕ್ ನಡುವೆ ವಿನಮಯ ಮಾಡಿಕೊಳ್ಳುವಂತಹ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಬಂದ ಬಳಿಕ ಒಪ್ಪಂದವನ್ನು ಹಿಂಪಡೆಯಲಾಗಿದೆ.

ಹಳೆಯ ವಿದ್ಯಾರ್ಥಿ, ಶಿಕ್ಷಕರು ಹಾಗೂ ಹಾಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರುಗಳನ್ನು ಒಂದೇ ವೇದಿಕೆಗೆ ತರುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಸುರಕ್ಷತೆಯ ದೃಷ್ಟಿಯಿಂದ ಈ ಒಪ್ಪಂದ ಸರಿಯಲ್ಲವೆಂದು ಸಾರ್ವಜನಿಕರು ಅಭಿಪ್ರಾಯಿಸಿದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, ಶಿಕ್ಷಣ ಇಲಾಖೆ ಸ್ಕೂಗ್‌ಲಿಂಕ್ ಜೊತೆಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಪಡಿಸಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಖಾಸಗಿ ಸಂಸ್ಥೆಯೊಂದು ಮಕ್ಕಳ, ಪಾಲಕರ, ಶಿಕ್ಷಕರ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿ ಇರಿಸುವ ನಂಬಿಕೆ ಇರುವುದಿಲ್ಲ. ಹಾಗೂ ಸರಕಾರದ ಈ ದತ್ತಾಂಶವನ್ನು ಇತರೆ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿದರೆ ಸಮಸ್ಯೆಯಾಗಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News