ಹಾಸನ: ನಿಷೇಧ ಹಿಂಪಡೆಯಲು ಆಗ್ರಹಿಸಿ ಪಿಎಫ್‍ಐ ಪ್ರತಿಭಟನೆ

Update: 2018-02-23 17:15 GMT

ಹಾಸನ.ಫೆ.23: ಸಂಘಟನೆಯ ಮೇಲಿನ ಹೇರಿರುವ ನಿಷೇಧವನ್ನು ಹಿಂಪಡೆಯಲು ಮತ್ತು ಕಾರ್ಯಕರ್ತರ ಮೇಲಿನ ದೌರ್ಜನ್ಯ ನಿಲ್ಲಿಸುವಂತೆ ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಜಾರ್ಖಂಡಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಲಾಗಿದ್ದು, ಇದಕ್ಕೆ ಕಾರಣರಾಗಿರವ ಜಾರ್ಖಂಡ್ ಮುಖ್ಯಮಂತ್ರಿ ಪಿಎಫ್‍ಐ ಸದಸ್ಯರು ಈಗ ನಿಷ್ಕ್ರಿಯವಾಗಿರುವ ಐಎಸ್‍ಐಎಸ್ ಸಂಘಟನೆಯಿಂದ ಪ್ರಭಾವಿತರಾಗಿದ್ದಾರೆ ಎಂದು ಆರೋಪಿಸಲಾಗಿದೆ ಎಂದರು. ಇಂತಹ ನಿಷೇಧ ತೀರ್ಮಾನವು ಪೂರ್ವಗ್ರಹಪೀಡಿತವಾಗಿದೆ. ಜೊತೆಗೆ ಸಂವಿಧಾನ ವಿರೋಧಿಯಾಗಿದೆ. ಪಿಎಫ್‍ಐ ಸಂಘಟನೆಯು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದಲೂ ಭಾರತದ 17 ರಾಜ್ಯಗಳಲ್ಲಿ ನೊಂದಾಣಿ ಆಗಿರುವ ಸಂಘಟನೆಯಾಗಿದೆ ಎಂದರು. 2015 ರಿಂದ ಜಾರ್ಖಂಡ್ ನ ಕೆಲ ಭಾಗಗಳಲ್ಲಿ ಕಾರ್ಯಾಚರಿಸುತ್ತಿದ್ದು, ಸರಕಾರಿ ಅಧಿಕಾರಿಗಳಿಂದ ಬಹಳಷ್ಟು ಪಕ್ಷಪಾತದಿಂದ ಕೂಡಿದ ಪ್ರತಿಕ್ರಿಯೆಗಳನ್ನು ಸಂಘಟನೆಯು ಎದುರಿಸುತ್ತಾ ಬಂದಿದೆ. ರಾಜ್ಯದಲ್ಲಿ ಥಳಿಸಿ ಹತ್ಯೆಗೈಯುವ ಅನೇಕ ಪ್ರಕರಣಗಳು ನಡೆಯುತ್ತಿದ್ದು, ಇಂತಹ ವಿವಿಧ ಘಟನೆಗಳಲ್ಲಿ ಭಾಗಿಯಾಗಿರುವ ಅಪರಾಧಿಗಳ ವಿರುದ್ಧ ಕಾನೂನು ಕ್ರಮದ ಹೋರಟಕ್ಕಾಗಿ ನಮ್ಮ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು. 

ಕಳೆದ ವರ್ಷ ಸರಯ್‍ಕಲಾ ಲಿಂಚಿಂಗ್ ಪ್ರಕಣದಲ್ಲಿ ನಾಲ್ವರು ಅಮಾಯಕರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನ್ಯಾಯಾಲಯದಲ್ಲಿ ಸಾಕ್ಷಿಗಳು ನುಡಿದ ದಿನವೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೇಲೆ ನಿಷೇಧದ ಘೋಷಣೆಯಾಗಿದೆ. ಜೊತೆಗೆ ಸ್ಥಳೀಯ ಬಿಜೆಪಿ ನಾಯಕ ಹಿಸಾಬಿ ರಾಯನ ಪ್ರಚೋದನಕಾರಿ ಭಾಷಣದ ವಿರುದ್ಧ ಪ್ರತಿಭಟನೆ ನಡೆಸಿದ ನಮ್ಮ ಸದಸ್ಯರ ವಿರುದ್ಧ ಸುಳ್ಳು ಆರೋಪ ಹೊರಿಸಿ ಸಿಲುಕಿಸಿದ ಪ್ರಕರಣದಲ್ಲಿ ಪಾಕುರ ಜಿಲ್ಲಾ ಎಸ್ಪಿ ವಿರುದ್ಧವು ವಿಚಾರಣೆ ಮಾಡಲಾಗುತ್ತಿದೆ ಎಂದರು.

ಇಂತಹ ಎಲ್ಲಾ ಬೆಳವಣಿಗೆಗಳು ಜಾರ್ಖಂಡ ಸರಕಾರದ ಉದ್ದೇಶಪೂರ್ವಕ ಎಂಬುದು ಬಹಿರಂಗವಾಗಿದೆ. ಪ್ರಕಟಣೆಯ ಮೂಲಕ ನಿಷೇಧದ ಮಾಹಿತಿ ದೊರೆತ ಬೆನ್ನಿಗೆ ರಾಜ್ಯ ಘಟಕದಿಂದ ವರದಿಯು ಬಂದಿದ್ದು, ಸಂಘಟನೆಯ ಪ್ರಾಬಲ್ಯವಿದ್ಧ ಪ್ರಾಂತ್ಯಗಳಲ್ಲಿ ಪೊಲೀಸರು ಸಂಘಟನೆಯ ಸದಸ್ಯರನ್ನು ಗುರಿಪಡಿಸಿ ಕಾರ್ಯಾಚರಣೆ ಕೂಡ ನಡೆಸಲಾಗುತ್ತಿದೆ. ಇಷ್ಟಕ್ಕೆ ಸುಮ್ಮನಾಗದೆ ಕಚೇರಿಗಳ ಮೇಲೆ ದಾಳಿ ನಡೆಸಿ ಬೀಗ ಹಾಕಿ ಮತ್ತು ಕಾರ್ಯಕರ್ತರನ್ನು ಹುಡುಕಾಟದಲ್ಲಿ ತೊಡಗಲಾಗಿದೆ ಎಂದು ದೂರಿದರು.

ಸಂಘಟನೆಯ ವಿರುದ್ಧ ಸುಳ್ಳು ಆರೋಪಗಳು ಬಂದಾಗ 2017 ಅಕ್ಟೋಬರ್ ನಲ್ಲಿ ಸಂಘಟನೆಯು ದೇಶಾದ್ಯಂತ ಮಹಾ ಸಮಾವೇಶವನ್ನು ಆಯೋಜಿಸಿ ವಾಸ್ತವ ಸ್ಥಿತಿಯನ್ನು ಮತ್ತು ಪ್ರಜಾಸತ್ತಾತ್ಮಕವಾಗಿರುವ ಸಂಘಟನೆಯ ಹೋರಾಟಗಳನ್ನು ಜನರಿಗೆ ಮತ್ತು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ ಎಂದ ಅವರು, ತಪ್ಪು ಮಾಹಿತಿ ಹಾಗೂ ಕಪೋಲಕಲ್ಪಿತ ಆಧಾರಗಳ ಮೇಲೆ ನಿಷೇಧದ ತೀರ್ಮಾನ ತೆಗೆದುಕೊಂಡಿರುವ ಜಾಖಂಡ್ ಸರಕಾರದ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನಿಷೇಧವನ್ನು ಹಿಂಪಡೆದು ಸದಸ್ಯರ ಮೇಲೆ ನಡೆಸಲಾಗಿರುವ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಸೂಫಿ ಇಬ್ರಾಹಿಂ, ತಾಲೂಕು ಅಧ್ಯಕ್ಷ ಅಪ್ಜಲ್, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಫೈರೋಜು ಪಾಷ, ಉಪಾಧ್ಯಕ್ಷ ಅಮೀರ್‍ಜಾನ್ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News