×
Ad

ಸೊರಬ: ಪಟ್ಟಣದ ಪಪಂ ಕಾರ್ಯಾಲಯದಲ್ಲಿ ಅಯವ್ಯಯ ಸಾಮಾನ್ಯ ಸಭೆ

Update: 2018-02-23 23:04 IST

ಸೊರಬ,ಫೆ.23: ಪಟ್ಟಣದಲ್ಲಿರುವ ಕುರಿಮಾಂಸ ಮಳಿಗೆಗಳಲ್ಲಿ ಮಾರಲು ಮಾಂಸಕ್ಕಾಗಿ ಕಡಿಯುವ ಕುರಿಗಳನ್ನು ವೈದ್ಯರ ತಪಾಸಣೆಯ ನಡೆಸಿ ಕಡಿಯಲಾಗುತ್ತದೆಯೇ ಎಂದು ಪಪಂ ಸದಸ್ಯ ಎಂ.ಡಿ,ಉಮೇಶ್ ಪಪಂ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು. 

ಪಟ್ಟಣದ ಪಪಂ ಕಾರ್ಯಾಲಯದಲ್ಲಿ ಗುರುವಾರ ನಡೆದ ಅಯವ್ಯಯ ಸಾಮಾನ್ಯ ಸಭೆಯಲ್ಲಿ ಅವರು ಪ್ರಶ್ನಿಸಿದ್ದೂ ಅಲ್ಲದೇ ಗುಟ್ಕಾವನ್ನು ತಿಂದು ಮಾಂಸದ ಮೇಲೆ ಉಗುಳಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಆತಂಕಕಾರಿ ಅಂಶವನ್ನು ಸಭೆಯ ಗಮನಕ್ಕೆ ತಂದರು.

ರೋಗದ, ನಿತ್ರಾಣಗೊಂಡ ಕುರಿಗಳನ್ನು ಕಡಿದು ಮಾರಾಟಮಾಡಲಾಗುತ್ತಿದೆ. ಈ ಕುರಿಗಳನ್ನು ಯಾವುದೇ ಪರಿಕ್ಷೆ ಮಾಡದೆ ಮಾರಟ ಮಾಡಲಾಗುತ್ತಿದೆ ಹಾಗು ಬೇರೆ ಊರುಗಳಿಗಿಂತಲೂ ಹೆಚ್ಚಿನ ಬೆಲೆಯನ್ನು ಪಡೆಯಲಾಗುತ್ತಿದೆ ಎಂಬ ಚರ್ಚೆ ನಡೆದ ನಂತರ ಮಾಂಸ ಮಾರಾಟ ಮಳಿಗೆಗಳಿಗೆ ನೋಟಿಸ್ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. 

ಕಳೆದ ವರ್ಷ ಸಂತೆ ಸುಂಕ ವಸೂಲಾತಿಯನ್ನು ಹರಾಜಿನಲ್ಲಿ ಪಡೆದವರು ಇನ್ನೂ ಒಂದು ಲಕ್ಷ ರೂ ಗಳನ್ನು ಬಾಕಿ ಕೊಡಬೇಕಾಗಿದ್ದು, ಇನ್ನೊಂದು ವಾರದಲ್ಲಿ ಅದನ್ನು ಪಡೆಯಲಾಗುವುದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಆಗ ಸದಸ್ಯರು ಪ್ರತಿಕ್ರಿಯಿಸಿ, ಹರಾಜಿನಲ್ಲಿ ಬಿಡ್ ಮಾಡಿದವರು 20 ದಿನಗಳಲ್ಲಿ ಹಣವನ್ನು ಪಾವತಿ ಮಾಡಬೇಕೆಂಬ ನಿಯಮವಿದ್ದಾಗಲೂ ಒಂದು ವರ್ಷ ಕಳೆದರೂ ಈ ಹಣ ಇನ್ನೂ ಜಮೆಯಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ, ಇನ್ನು ಕೆಲವೇ ದಿನಗಳಲ್ಲಿ ಪುನಃ ಹರಾಜು ಪ್ರಕ್ರಿಯೆ ಪ್ರಾರಂಭವಾಗುವುದಿದೆ, ಅಷ್ಟರಲ್ಲಿ ಹಣ ಜಮೆ ಮಾಡಿಸಿಕೊಳ್ಳುವಂತೆ ಆಗ್ರಹಿಸಿದರಲ್ಲದೆ ಅಕಸ್ಮಾತ್ ಹಣ ಪಡೆಯಲಾಗದಿದ್ದಲ್ಲಿ ಅಧಿಕಾರಿಗಳೇ ಜವಾಬ್ದಾರರು ಎಂದರು.  

ಅಯವ್ಯಯ ಮಂಡನೆಯ ವೇಳೆ ಘನ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕವಾಗಿ ಲಕ್ಷ-ಲಕ್ಷ ರೂಪಾಯಿಗಳನ್ನು ಮೀಸಲಿಡಲಾಗುತ್ತಿದೆ. ಇಷ್ಟೆಲ್ಲಾ ಹಣದ ಅವಶ್ಯಕತೆಯಿದೆಯೇ ಎಂದು ಸದಸ್ಯ ಮಹೇಶ ಗೌಳಿ ಪ್ರಶ್ನಿಸಿದ್ದಲ್ಲದೆ ಸಂಬಂಧಿಸಿದ ಸ್ಥಳ ಪರಿಶೀಲನೆಗೆ ಹೋಗುವ ಆಸಕ್ತಿ ತೋರಿಸಿದಾಗ, ಆ ಸ್ಥಳಕ್ಕೆ ಹೋಗುವುದು ಬೇಡ, ಅಲ್ಲಿಯ ವಾಸನೆ ತಡೆಯಲು ಆಗುವುದಿಲ್ಲ ಎಂದು ಹೇಳುತ್ತಿರಿ. ನಿಜವಾಗಿಯೂ ಇಷ್ಟು ಹಣದ ಅವಶ್ಯಕತೆ ಘನತ್ಯಾಜ್ಯ ನಿರ್ವಹಣೆಗೆ ಬೇಕಾಗಿದೆಯಾ ಎಂಬ ಅನುಮಾನ ವ್ಯಕ್ತಪಡಿಸಿದರು. 

ಪಟ್ಟಣ ಪಂಚಾಯತ್ ಸಮೀಪದಲ್ಲಿಯೇ ವೈನ್‍ಶಾಪ್ ಮಳಿಗೆಯೊಂದು ತಲೆಯತ್ತಿದ್ದು, ಆ ರಸ್ತೆಯಲ್ಲಿ ಪದೆ ಪದೆ ಅಪಘಾತ ಸಂಭವಿಸುತ್ತಿದೆ. ವೈನ್‍ಶಾಪ್‍ನಿಂದ ಹೊರಬರುವವರೇ ಈ ಅವಘಡಕ್ಕೆ ತುತ್ತಾಗುತ್ತಿದಾರೆ. ಪಟ್ಟಣ ಪಂಚಾಯತ್ ನಿಂದ ಈ ವೈನ್‍ಶಾಪ್ ನಡೆಸಲು ಅನುಮತಿ ಪಡೆಯಲಾಗಿದೆಯೇ ಎಂದು ಎಂ.ಡಿ. ಉಮೇಶ್ ಪ್ರಶ್ನಿಸಿದಾಗ, ಅಧಿಕಾರಿಗಳಿಂದ ವೈನ್‍ಶಾಪ್‍ಗೆ ಅನುಮತಿ ಪಡೆಯಲಾಗಿಲ್ಲ ಎಂಬ ಉತ್ತರ ಬಂತು. ಕೂಡಲೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಸಭೆಯಲ್ಲಿ ಪಪಂ ಮುಖ್ಯಾಧಿಕಾರಿ ಟಿ.ಬಾಲಚಂದ್ರ ಅಯ-ವ್ಯಯವನ್ನು ಮಂಡಿಸಿ, 2018-19ನೇ ಸಾಲಿಗೆ ಒಟ್ಟು 70.95 ಲಕ್ಷಗಳ ಆದಾಯ ನಿರೀಕ್ಷೆಯ ಮಾಡಿರುವುದಾಗಿಯೂ ಮತ್ತು 2017-18ನೇ ಸಾಲಿಗೆ 12.77 ಲಕ್ಷ ರೂಗಳ ಉಳಿತಾಯ ಮತ್ತು 2018-19 ನೇ ಸಾಲಿನ ಉಳಿತಾಯ ಬಜೆಟ್ ಮಡಿಸಿದರು. ಒಟ್ಟು ಉಳಿತಾಯ 14.87 ಲಕ್ಷ ರೂ ಗಳನ್ನು ಬಜೆಟ್‍ನಲ್ಲಿ ನಿರೀಕ್ಷೆ ಮಾಡಲಾಗಿದೆ.

ಸಭೆಯಲ್ಲಿ ಪ.ಪಂ ಅಧ್ಯಕ್ಷೆ ಬೀಬಿ ಝುಲೇಖಾ, ಉಪಾಧ್ಯಕ್ಷೆ ರತ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಚಿ ಹನುಮಂತಪ್ಪ, ಪ್ರಶಾಂತ್ ಮೇಸ್ತ್ರಿ ಸೇರಿದಂತೆ ಪಪಂ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News