ಬಾಗೇಪಲ್ಲಿ: ನ್ಯಾಷನಲ್ ಕಾಲೇಜ್ ವಾರ್ಷಿಕೋತ್ಸವ ಕಾರ್ಯಕ್ರಮ
ಬಾಗೇಪಲ್ಲಿ,ಫೆ.23: ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥಿಗಳು ತಮ್ಮ ತಂದೆ ತಾಯಿಗಳ ಪರಿಶ್ರಮವನ್ನು ನೆನಪಿನಲ್ಲಿಟ್ಟುಕೊಂಡು ಓದಿ ಉನ್ನತ ಸ್ಥಾನಮಾನ ಗಳಿಸಿ ಬಲಿಷ್ಠ ಭಾರತದ ನಿರ್ಮಾಣಕ್ಕೆ ಮುನ್ನುಡಿ ಬರೆಯಬೇಕಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಅವರು ಪಟ್ಟಣದ ನ್ಯಾಷನಲ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯನವರು ಈ ಭಾಗಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅದು ನ್ಯಾಷನಲ್ ಕಾಲೇಜು ಸ್ಥಾಪನೆ ಮಾಡಿ, ಈ ಭಾಗದ ಬಡ ತಂದೆತಾಯಿಗಳ ಮಕ್ಕಳಿಗೆ ವಿದ್ಯಾದಾನ ಮಾಡುವ ಮುಖಾಂತರ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಈ ಕ್ಷೇತ್ರದಲ್ಲಿ ಅವರು ಜೀವನಪೂರ್ತಿ ಬಡವರಿಗಾಗಿ ಮುಡುಪಿಟ್ಟವರು, ಸಮಾಜದ ಸುಖಕ್ಕಾಗಿ ತನ್ನ ಸುಖವನ್ನೇ ತ್ಯಾಗ ಮಾಡಿದ ಉದಾರಿಗಳು. ಕಾಲೇಜು ಪ್ರಾರಂಭವಾದ ಹೊಸ ದಿನಗಳಲ್ಲಿ ಬೆಂಗಳೂರಿನಿಂದ ಬಾಗೇಪಲ್ಲಿಗೆ ಲಾರಿಬಸ್‍ಗಳಲ್ಲಿ ಪ್ರಯಾಣ ಮಾಡಿ ಇಲ್ಲಿಗೆ ಬರುತ್ತಿದ್ದರು. ಅವರ ಸರಳ ಸಜ್ಜನಿಕೆ ಎಲ್ಲರಿಗೂ ಆದರ್ಶ ಎಂದರು.
ನ್ಯಾಷನಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎಚ್.ಎಸ್. ರಾಮರಾವ್ ಮಾತನಾಡಿ, ಆಂದ್ರದ ಗಡಿಭಗದಲ್ಲಿರುವ ಈ ಭಾಗದಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬಾಲಾಜಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿದ್ದ ಗೊರ್ತಪಲ್ಲಿ ಶಂಕರರೆಡ್ಡಿ ನೇತೃತ್ವದ ಸಮಿತಿಯು ಡಾ. ಎಚ್.ಎನ್.ರವರ ಬಳಿಗೆ ಹೋಗಿ ನ್ಯಾಷನಲ್ ಕಾಲೇಜನ್ನು ಸ್ಥಾಪಿಸಬೇಕೆಂದು ಕೋರಿದಾಗ ಅವರ ಮನವಿಗೆ ಸ್ಪಂದಿಸಿದ ಎಚ್.ಎನ್.ರವರು ಬಾಗೇಪಲ್ಲಿಗೆ ಬಂದು ಸ್ಥಳ ಪರಿಶೀಲನೆ ನಡೆಸಿ ಕಾಲೇಜನ್ನು ಸ್ಥಾಪಿಸಿದರು. ಈಗ ಈ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ನೀವು ಕೂಡಾ ಇದೇ ದಾರಿಯಲ್ಲಿ ಸಾಗಬೇಕಾಗಿದೆ ಎಂದರು
ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಗೌರವ ಕಾರ್ಯದರ್ಶಿ ಪ್ರೊ. ಎಸ್.ಎನ್.ನಾಗರಾಜರೆಡ್ಡಿ, ಮಾತನಾಡಿ, ಈ ದೇಶದಲ್ಲಿ ಬಹು ಭಾಷೆ, ಬಹು ಸಂಸ್ಕೃತಿಗಳಿದ್ದರೂ, ಜಾತ್ಯಾತೀತ ತತ್ವಗಳು ನಮ್ಮೆಲ್ಲರನ್ನೂ ಒಂದಾಗಿಸಿದೆ. ಹಾಗಾಗಿ ನಮ್ಮ ಸಂವಿಧಾನದ ಆಶಯಗಳನ್ನು ಗೌರವಿಸಿ ಉಳಿಸಿಬೆಳೆಸುವ ನಿಟ್ಟಿನಲ್ಲಿ ತಾವೆಲ್ಲರೂ ಮುನ್ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ನ್ಯಾಷನಲ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ವಿ.ವೆಂಕಟಶಿವಾರೆಡ್ಡಿ, ಪ್ರಾಂಶುಪಾಲ ಪ್ರೊ.ಬಿ.ಪಿ.ವಿಜಯ್‍ಕುಮಾರ್, ಗೌರ್ನಿಂಗ್ ಕೌನ್ಸಿಲ್ ಸದಸ್ಯ ಕೆ.ನರಸಿಂಹಪ್ಪ, ಪ್ರಾಂಶುಪಾಲರಾದ ಪ್ರೊ.ಪಿ.ವೆಂಕಟರಾಂ, ಉಪ ಪ್ರಾಂಶುಪಾಲರಾದ ಪ್ರೊ.ಎಚ್.ವಿ. ಶಿವಕುಮಾರ್ ಡಾ. ರಾಮಯ್ಯ ಡಾ.ಸೋಮಶೇಖರ್, ಕೆ.ಎನ್.ಪ್ರಸಾದ್, ಜಿ.ಪಂ. ಸದಸ್ಯ ನರಸಿಂಹಪ್ಪ ಗ್ರಂಥಾಪಾಲಕ ಜಯರಾಮರೆಡ್ಡಿ ರಾಜ್ಯ ಯುವ ಪ್ರಶಸ್ತಿ ವಿಜೇತ ವಿ.ರವಿ.ಮತ್ತಿತರರು ಉಪಸ್ಥಿತರಿದ್ದರು.