ದಾವಣಗೆರೆ: ಮಾರ್ಚ್ 5, 6ರಂದು ದಲಿತ ಸಾಹಿತ್ಯ ಸಮ್ಮೇಳನ

Update: 2018-02-23 17:48 GMT

ದಾವಣಗೆರೆ,ಫೆ.23: ನಗರದಲ್ಲಿ ಮಾರ್ಚ್ 5 ಮತ್ತು 6ರಂದು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯ ಸಹಯೋಗದಲ್ಲಿ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಾಹಿತಿಗಳನ್ನು ಮುಖ್ಯಧಾರೆಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿರುವ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಕವಿ ಎಲ್.ಹನುಮಂತಯ್ಯನವರು ಆಯ್ಕೆಯಾಗಿದ್ದು, ಇವರ ಅಧ್ಯಕ್ಷತೆಯಲ್ಲಿ ನಡೆಯುವ ದಲಿತ ಸಾಹಿತ್ಯ ಸಮ್ಮೇಳನವನ್ನು ಮಾ.5ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಲಿತ ಕವಿ ಡಾ.ಸಿದ್ಧಲಿಂಗಯ್ಯ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದ ಅವರು, ಈ ಸಮ್ಮೇಳನದಲ್ಲಿ ವಚನಗಳಲ್ಲಿ ದಲಿತ ಅಭಿವ್ಯಕ್ತಿ, ದಿ. ಬಸವಲಿಂಗಪ್ಪನವರ ಜೀವನ ಸಾಧನೆ, ಪ್ರೊ.ಬಿ.ಕೃಷ್ಣಪ್ಪನವರ ಬದುಕು-ಬರಹ, ದಲಿತ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ, ಸಮ್ಮೇಳನದ ಅಧ್ಯಕ್ಷರು ಆಗಿರುವ ಎಲ್.ಹನುಮಂತಯ್ಯನವರ ಬದುಕು-ಬರಹಗಳಿಗೆ ಸಂಬಂಧಪಟ್ಟ ಗೋಷ್ಠಿಗಳು ನಡೆಯಲಿವೆ ಎಂದರು. 

ಕಾರ್ಯಕ್ರಮಕ್ಕೂ ಮುನ್ನ ಮಾ.5ರಂದು ಬೆಳಿಗ್ಗೆ ನಗರದ ಗುಂಡಿ ವೃತ್ತದಿಂದ ಕಾರ್ಯಕ್ರಮ ನಡೆಯುವ ಕುವೆಂಪು ಕನ್ನಡ ಭವನದ ವರೆಗೆ ಸಮ್ಮೇಳನದ ಅಧ್ಯಕ್ಷರ ಕಾಲ್ನಡಿಗೆ ಮೆರವಣಿಗೆ ನಡೆಯಲಿದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಗುವ ಪುಸ್ತಕಗಳ ಆನ್‍ಲೈನ್ ಮಾರಾಟ ಆರಂಭಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ತಿಳಿಸಿದರು.

ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ, ಅವರಿಗೆ ಸುಲಭವಾಗಿ ಪುಸ್ತಕ ಲಭ್ಯವಾಗುತ್ತಿಲ್ಲ. ಆದ್ದರಿಂದ ಓದುವ ಪ್ರಕ್ರಿಯೆಯಿಂದ ಹಲವರು ವಿಮುಖವಾಗಿದ್ದಾರೆ. ಆದ್ದರಿಂದ ಓದುಗರ ಮನೆ ಬಾಗಿಲಿಗೆ ಪುಸ್ತಕ ತಲುಪಿಸಬೇಕೆಂಬ ಸದುದ್ದೇಶದಿಂದ ಈಗಾಗಲೇ ನಮ್ಮ ಪ್ರಾಧಿಕಾರದಿಂದ ಪ್ರಕಟವಾಗುವ ಪುಸ್ತಕಗಳ ಆನ್‍ಲೈನ್ ಮಾರಾಟ ಆರಂಭಿಸಲಾಗಿದೆ. ಆನ್‍ಲೈನ್ ಮಾರಾಟ ಆರಂಭವಾದ ಒಂದೇ ವಾರದಲ್ಲಿ ಸುಮಾರು 35 ಸಾವಿರ ಪುಸ್ತಕಗಳು ಮಾರಾಟವಾಗಿವೆ ಎಂದರು.

ಪ್ರಾಧಿಕಾರದಿಂದ ಬರುವ ಮಾರ್ಚ್ 10ರಂದು ಬೆಂಗಳೂರಿನಲ್ಲಿ ಪ್ರಕಾಶಕರ ಸಮ್ಮೇಳನ ಆಯೋಜಿಸಲಾಗಿದ್ದು, ಈ ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರಕಾಶಕ ರಮಾಕಾಂತ್ ಜೋಷಿ ವಹಿಸಿಕೊಳ್ಳಲಿದ್ದಾರೆ. ರಾಜ್ಯಾದ್ಯಂತ ಸಂಚಾರಿ ವಾಹನಗಳ ಮೂಲಕ ಜನರ ಬಾಗಿಲಿಗೆ ಪುಸ್ತಕ ತಲುಪಿಸುವ ಉದ್ದೇಶಿದಂದ ಪ್ರಾಧಿಕಾರದಿಂದ 4 ವಿಭಾಗಗಳಲ್ಲಿ ಪುಸ್ತಕ ಜಾಥಾ ನಡೆಸಲು ಯೋಜನೆ ರೂಪಿಸಲಾಗಿದ್ದು, ಈ ಯೋಜನೆಗೆ ವಾಹನ ನೀಡಲು ಸಾರಿಗೆ ಸಚಿವರು ಸಮ್ಮತಿ ನೀಡಿದ್ದಾರೆ. ಅಲ್ಲದೆ, ಈ ಯೋಜನೆಗೆ ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ1.50 ಕೋಟಿ. ರು. ಮೀಸಲಿಟ್ಟಿರುವುದು ಅಭಿನಂದನಾರ್ಹ ಎಂದು ಹೇಳಿದರು.

ಕನ್ನಡ ಪುಸ್ತಕ ಸಂಸ್ಕೃತಿಯ ಕುರಿತು 700 ಪುಟಗಳ ಮೂರು ಸಂಪುಟಗಳಲ್ಲಿ ಪುಸ್ತಕ ಚರಿತ್ರೆ ಹೊರ ತರಲು ಪ್ರಾಧಿಕಾರ ಚಿಂತನೆ ನಡೆಸಿದೆ. ಪ್ರತಿವರ್ಷ 40 ಜನ ಯುವ ಬರಹಗಾರರ ಚೊಚ್ಚಲ ಕೃತಿಗಳಿಗೆ 15 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಒಬ್ಬೊಬ್ಬ ಲೇಖಕರ ಯೋಗ್ಯ ಪುಸ್ತಕಗಳನ್ನು 15 ಸಾವಿರ ರೂ.ಗಳಲ್ಲಿ ಸಗಟು ಪುಸ್ತಕ ಖರೀದಿಗೆ ಚಿಂತನೆ ನಡೆಸಲಾಗಿದ್ದು, ಇದಕ್ಕೆ ಸರ್ಕಾರ 1 ಕೋಟಿ ರು. ಅನುದಾನ ಮೀಸಲಿಟ್ಟಿದೆ. ಪ್ರಕಾಶಕರು ಹಾಗೂ ಕಲಾವಿದರಿಗಾಗಿ ಪುಸ್ತಕ ಬಹುಮಾನ, ಪ್ರಶಸ್ತಿ ನೀಡಲಾಗಿದೆ ಎಂದರು.

ಅಭಿವ್ಯಕ್ತ ಸಂಸ್ಥೆಯ ಮಲ್ಲಿಕಾರ್ಜುನ ಕಡಕೋಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಮತ್ತಿತರರು ಹಾಜರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News