ಮೋದಿಗೆ ರೈತ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇಲ್ಲ: ಸಿದ್ದರಾಮಯ್ಯ
ಬೆಳಗಾವಿ, ಫೆ.24: ಕರ್ನಾಟಕದ ಕಾಂಗ್ರೆಸ್ ಸರಕಾರ 10 ಪರ್ಸೆಂಟ್ ಸರಕಾರ ಎಂದು ಟೀಕೆ ಮಾಡುವ ಪ್ರಧಾನಿ ಮೋದಿಯವರದ್ದು 90 ಪರ್ಸೆಂಟ್ ಭ್ರಷ್ಟ ಸರಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಶನಿವಾರ ಇಲ್ಲಿನ ಅಥಣಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಎರಡನೇ ಹಂತದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಮ್ಮ ಸರಕಾರದ ವಿರುದ್ಧ ಬೇಜಾವಾಬ್ದಾರಿಯುತವಾಗಿ ಆರೋಪ ಮಾಡುತ್ತಿದ್ದಾರೆ. ಆದರೆ, ಮೋದಿಗೆ ಸಾಧ್ಯವಾದರೆ ಇಂಟೆಲಿಜೆನ್ಸಿ, ಸಿಬಿಐಗಳನ್ನು ಬಳಸಿಕೊಂಡು ನಮ್ಮ ಸರಕಾರದ ಭ್ರಷ್ಟಚಾರದ ಬಗ್ಗೆ ದಾಖಲೆ ನೀಡಲಿ ಎಂದು ಸವಾಲು ಹಾಕಿದರು.
ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಮಲ್ಯ 9 ಸಾವಿರ ಕೋಟಿ ರೂ., ನೀರವ್ ಮೋದಿ 11 ಸಾವಿರ ಕೋಟಿ ರೂ. ಹಾಗೂ ಲಲಿತ್ ಮೋದಿ ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ, ದೇಶದಿಂದಲೇ ಪರಾರಿಯಾಗಿದ್ದಾರೆ. ಇಷ್ಟೆಲ್ಲಾ ಹಗರಣ ಪ್ರಧಾನಿ ಮೋದಿಯ ಕುಮ್ಮಕ್ಕಿಲ್ಲದೇ ನಡೆದಿರಲು ಸಾಧ್ಯವಿಲ್ಲ. ಆದರೆ, ರೈತರ ಸಾಲ ಮನ್ನಾ ಮಾಡಿ ಎಂದು ಹೇಳಿದರೆ ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತೆ ಎಂದು ಸಬೂಬು ಹೇಳುತ್ತಾರೆ ಎಂದ ಸಿದ್ದರಾಮಯ್ಯ, ಮೋದಿಗೆ ರೈತರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಕಿಡಿಕಾರಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೊದಲು ತಮ್ಮ ಹಿಂದೆ-ಮುಂದೆ ಯಾರಿದ್ದಾರೆ ಎನ್ನುವುದನ್ನು ನೋಡಿಕೊಳ್ಳಬೇಕು. ಭ್ರಷ್ಟಚಾರದ ಆರೋಪದ ಅಡಿಯಲ್ಲಿ ಸಿಎಂ ಆಗಿದ್ದಾಗಲೇ ಜೈಲಿಗೆ ಹೋದ ಯಡಿಯೂರಪ್ಪ, ಜನಾರ್ಧನರೆಡ್ಡಿ ಹಾಗೂ ಇನ್ನಿತರರನ್ನು ಪಕ್ಕದಲ್ಲಿಟ್ಟುಕೊಂಡು ನಮ್ಮ ವಿರುದ್ದ ಆರೋಪ ಮಾಡುತ್ತೀರ. ಅಷ್ಟೇ ಅಲ್ಲದೇ, ಭ್ರಷ್ಟರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡು ಸುತ್ತಾಡುತ್ತಿದ್ದೀರಲ್ವಾ? ನಿಮಗೆ ನಾಚಿಕೆ ಆಗುತ್ತಿಲ್ಲವೇ ಎಂದು ಪ್ರಶ್ನಿಸಿದರು.
ನೂರು ಸಲ ಬಂದರೂ ಗೆಲ್ಲುವುದಿಲ್ಲ: ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ನೂರು ಬಾರಿ ಬಂದು, ನೂರು ಭಾಷಣ ಮಾಡಿದರೂ ಇಲ್ಲಿನ ಜನ ನಿಮ್ಮ ಮಾತುಗಳಿಗೆ ಮರುಳಾಗುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುವುದಿಲ್ಲ, ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ಮುನ್ನುಡಿ ಬರೆಯಲಿದ್ದು, ಕೇಂದ್ರದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ, ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾಮಾಜಿಕ ನ್ಯಾಯದ ಮೇಲೆ ಭದ್ರತೆಯಿಲ್ಲದ, ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಹಾಗೂ ಜಾತಿ, ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಎಲ್ಲ ಧರ್ಮಗಳಿಗೂ ಸಮಾನವಾದ ನ್ಯಾಯ ನೀಡಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ. ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಮಾತನಾಡುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಹೀಗಾಗಿ, ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಾಗೂ ಪಶ್ಚಿಮ ಬಂಗಾಳದಿಂದ ಕೊಚ್ಚಿವರೆಗೂ ಕಾಂಗ್ರೆಸ್ ಪಕ್ಷ ಬಲಗೊಳ್ಳುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ
- ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿರೋಧ ಪಕ್ಷದ ನಾಯಕ