ಹನೂರು: ನಾಯಿಗಳ ದಾಳಿಗೆ ಜಿಂಕೆ ಬಲಿ
ಹನೂರು,ಫೆ.24: ಸಮೀಪದ ಬೆಳತ್ತೂರು ಗ್ರಾಮದಲ್ಲಿ ಶನಿವಾರ ನಾಯಿಗಳ ದಾಳಿಯಿಂದ ಎರಡೂವರೆ ವರ್ಷದ ಜಿಂಕೆಯೊಂದು ಸಾವನ್ನಪ್ಪಿದ ಘಟನೆ ನಡೆದಿದೆ.
ಗ್ರಾಮ ಸಮೀಪದ ಅರಣ್ಯ ಪ್ರದೇಶದಿಂದ ಗುರುವಾರ ಬೆಳಗ್ಗೆ 7ರ ಸುಮಾರಿಗೆ ಜಿಂಕೆಯೊಂದು ಗ್ರಾಮಕ್ಕೆ ಆಗಮಿಸಿದ್ದು, ಈ ವೇಳೆ ನಾಯಿಗಳು ಜಿಂಕೆಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಮಹಾಲಿಂಗೇಶ್ವರ ದೇಗುಲದ ಬಳಿ ನಾಯಿಗಳಿಂದ ಜಿಂಕೆಯನ್ನು ರಕ್ಷಿಸಿದ್ದಾರೆ. ನಂತರ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪೋನ್ ಮೂಲಕ ವಿಷಯ ಮುಟ್ಟಿಸಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬರುವಷ್ಟರೊಳಗೆ ಜಿಂಕೆಯು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಗ್ರಾಮಸ್ಥರಿಂದ ತರಾಟೆ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೃತಪಟ್ಟ ಜಿಂಕೆಯನ್ನು ಕೊಂಡೊಯ್ಯಲು ಮುಂದಾದರು. ಅದರೆ ಸ್ಥಳದಲ್ಲಿದ್ದ ಗ್ರಾಮಸ್ಥರು ಜಿಂಕೆಯನ್ನು ರಕ್ಷಿಸುವಂತೆ ಪೋನ್ ಮಾಡಿ ವಿಷಯ ತಿಳಿಸಿದ್ದರೂ ಒಂದೂವರೆ ಗಂಟೆಯ ಬಳಿಕ ಸ್ಥಳಕ್ಕೆ ಬಂದ ನಿಮ್ಮ ನಿರ್ಲಕ್ಷ್ಯದಿಂದಾಗಿ ಜಿಂಕೆಯು ಮೃತಪಟ್ಟಿದೆ. ಆಗಾಗಿ ಮೃತಪಟ್ಟ ಜಿಂಕೆಯನ್ನು ಕೊಂಡೊಯ್ಯಲು ಬಿಡುವುದಿಲ್ಲ. ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಎಂದು ಪಟ್ಟು ಹಿಡಿದರು.
ಈ ಬಗ್ಗೆ ಸುದ್ದಿ ತಿಳಿದ ಎಸಿಎಫ್ ಮುತ್ತೇಗೌಡ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಈ ವೇಳೆ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ ಮೃತ ಜಿಂಕೆಯನ್ನು ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ಶವ ಸಂಸ್ಕಾರ ನೆರವೇರಿಸಲಾಯಿತು.