ಫೆ.26 ಕ್ಕೆ ಕೌಶಲ್ಯ ಭಾಗ್ಯ ಯೋಜನೆಗೆ ಸಿದ್ದರಾಮಯ್ಯರಿಂದ ಚಾಲನೆ
ಬೆಂಗಳೂರು, ಫೆ. 24: ಕೌಶಲ್ಯ ಭಾಗ್ಯ ಯೋಜನೆಗೆ ಫೆ.26ಕ್ಕೆ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿದರು.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕ, ಯುವತಿಯರು ಕೌಶಲ್ಯಾಭಿವದ್ಧಿ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಕೌಶಲ್ಯ ಭಾಗ್ಯ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಕೌಶಲ್ಯ ಜಾಗೃತಿ ಅಭಿಯಾನ ಕಾರ್ಯಕ್ರಮ ಆರಂಭಿಸಿ ಯುವಕ, ಯುವತಿಯರಿಗೆ ಮಾರ್ಗದರ್ಶನ ಒದಗಿಸಲಾಗುವುದು. ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ನಿಗಮದ ವೆಬ್‌ಸೈಟ್ ಹಾಗೂ ಆಪ್‌ನಲ್ಲಿ ದೊರೆಯಲಿದೆ. ರಾಜ್ಯದಲ್ಲಿ ಅತ್ಯಂತ ಯಶಸ್ವಿ ಕೌಶಲ್ಯ ಮೇಳ ಆಯೋಜಿಸಿ, ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯುವಕ, ಯುವತಿಯರಿಗೆ ಸ್ವಯಂ ಉದ್ಯೋಗ, ಉದ್ಯಮ ಶೀಲತೆ ಮಾರ್ಗದರ್ಶನ ನೀಡಲಾಗುವುದು ಎಂದರು.
ಹಿರಿಯ ನಾಗರಿಕರಿಗೂ ಉದ್ಯೋಗಾವಕಾಶ ಕಲ್ಪಿಸಲು ಚಿಂತಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಬಹುಕೌಶಲ್ಯ ಅಭಿವೃದ್ಧಿ ಸಂವಹನ ಸಲಹಾ ಕೇಂದ್ರಗಳನ್ನು ಸ್ಥಾಪನೆ ಸೇರಿದಂತೆ, ವಿದೇಶ ಉದ್ಯೋಗ ಕೋಶ ಸ್ಥಾಪಿಸಿ ಯುವಕರಿಗೆ ತರಬೇತಿ ನೀಡಿ ವಿದೇಶಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ನೆರವು ನೀಡಲಾಗುವುದು. ಯುವಜನತೆ ಯೋಜನೆಯ ಸದುಪಯೋಗಪಡಿಸಿಕೊಳ್ಳಿ ಎಂದು ಮುರಳೀಧರ ಹಾಲಪ್ಪ ಕರೆ ನೀಡಿದರು.