ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್‍ ಅವ್ಯವಹಾರ ಡಕಾಯಿತಿಗಿಂತ ದೊಡ್ಡ ಪ್ರಕರಣ: ಕಿಮ್ಮನೆ ರತ್ನಾಕರ್

Update: 2018-02-24 14:57 GMT

ಶಿವಮೊಗ್ಗ, ಫೆ. 24: 'ಶಿವಮೊಗ್ಗ ನಗರದ ಡಿ.ಸಿ.ಸಿ. ಬ್ಯಾಂಕ್ ನಗರ ಶಾಖೆಯಲ್ಲಿ ನಡೆದ ಕೋಟ್ಯಾಂತರ ರೂ ಅವ್ಯವಹಾರವು ಡಕಾಯಿತಿಗಿಂತ ದೊಡ್ಡ ಪ್ರಕರಣವಾಗಿದೆ. ಇದಕ್ಕೆ ಕಾರಣರಾದವರನ್ನು ರಾಜಕೀಯವಾಗಿ ಬೆಳೆಸುವುದು ದೇಶದ ದೊಡ್ಡ ದುರಂತವಾಗಿದೆ' ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ. 

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಹುಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡರನ್ನು ದೋಷಾರೋಪಣ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದೇನೆ. ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. 

ಯಾವುದೇ ಚಿನ್ನಾಭರಣ ಅಡವಿಡದೆ ಕೇವಲ ಒಂದು ಚೀಟಿ ಇಟ್ಟುಕೊಂಡು 40 ಕೋಟಿ ರೂ. ಸಾಲ ನೀಡಲಾಗಿದೆ. ಇದಕ್ಕೆ ಅಧ್ಯಕ್ಷರಾಗಿದ್ದ ಆರ್.ಎಂ.ಮಂಜುನಾಥಗೌಡ ಕೂಡ ಕಾರಣರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳ ಸಮಗ್ರ ಪರಿಶೀಲನೆ ಮಾಡಿದ ನಂತರವಷ್ಟೆ ನನಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರಕಿದೆ ಎಂದರು. 

ಹೇರಾಫೇರಿ: ಯಾರು ಸಾಲ ಕೇಳಿದ್ದಾರೆ ಎಂಬುವುದಕ್ಕೆ ಅರ್ಜಿಯೂ ಇಲ್ಲ, ಅರ್ಜಿದಾರ ಯಾರೆಂಬುದೂ ಗೊತ್ತಿಲ್ಲ. ಮನಸೋ ಇಚ್ಚೆ ಅಕ್ರಮ ಎಸಗಲಾಗಿದೆ. 62 ಕೋಟಿ ರೂ. ಸಾಲಕ್ಕೆ ಬಡ್ಡಿ ಇಲ್ಲ, ಅಸಲೂ ಇಲ್ಲ, ವಸೂಲಾತಿಯೂ ಇಲ್ಲ. ಅವ್ಯವಹಾರದಲ್ಲಿ ಪಾಲುದಾರರಾಗಿರುವವರನ್ನು ಕೆಲವರು ಹೊಗಳುತ್ತಿರುವುದನ್ನು ನೋಡಿದರೆ ಸಾರ್ವಜನಿಕ ಜೀವನದಲ್ಲಿ ಏಕೆ ಇದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಇಂತವರನ್ನು ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಇಡೀ ದೇಶವನ್ನೇ ಮಾರಿಬಿಡುತ್ತಾರೆ ಎಂದು ಮಂಜುನಾಥಗೌಡ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. 

ಚಿನ್ನಾಭರಣ ಅಡಮಾನ ಸಾಲ ಮಂಜೂರಾತಿಯ ಉಪ ಸಮಿತಿಗೆ 2004 ರಿಂದ ಮಂಜುನಾಥ ಗೌಡರೇ ಅಧ್ಯಕ್ಷರಾಗಿದ್ದಾರೆ. ಹಾಗಾದರೆ ಅವ್ಯವಹಾರದಲ್ಲಿ ಅವರು ಏನೂ ತಪ್ಪು ಮಾಡಿಲ್ಲವೆ? ಎಂದು ಪ್ರಶ್ನಿಸಿರುವ ಅವರು, ಈ ಅವ್ಯವಹಾರದ ಬಗ್ಗೆ ಸಿಓಡಿ ತನಿಖೆ ನಡೆದಿದೆ. ದೋಷಾರೋಪ ಪಟ್ಟಿಯಿಂದ ಮಂಜುನಾಥ ಗೌಡರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದರು. 

ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುವಾಗ ಇದನ್ನು ಗಮನಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದವರನ್ನು ದೋಷಾರೋಪ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸೂಚಿಸಬಹುದಾಗಿದೆ. ಇಲ್ಲವಾದಲ್ಲಿ ತಾವೇ ಮಂಜುನಾಥಗೌಡರ ಹೆಸರನ್ನು ದೋಷಾರೋಪ ಪಟ್ಟಿಗೆ ಮತ್ತೆ ಸೇರ್ಪಡೆಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೆನೆ ಎಂದು ಸ್ಪಷ್ಟಪಡಿಸಿದ್ದಾರೆ. 

ತಮ್ಮ ವಿರುದ್ದ ರಾಜಕೀಯ ದ್ವೇಷದಿಂದ ಕೆಲವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ನನಗೀಗ ಬಿಡುವಿಲ್ಲ. ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ನನ್ನ ಮೇಲೆ ಯಾರ್ಯಾರು ಪ್ರಕರಣ ದಾಖಲಿಸಿದ್ದಾರೋ ಅವರ ವಿರುದ್ದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸುತ್ತೆನೆ. ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಇದೇ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ್ ಪ್ರತಿಕ್ರಿಯೆ ನೀಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News