ವನ್ಯ ಜೀವಿ ಸೆರೆಗೆ ಕೇಂದ್ರ ಸ್ಥಾಪನೆ: ಸಚಿವ ಟಿ.ಬಿ.ಜಯಚಂದ್ರ
ತುಮಕೂರು,ಫೆ.24: ಶಾಲಾ ಕೊಠಡಿಗಳ ರಿಪೇರಿ, ರಸ್ತೆ ಅಭಿವೃದ್ಧಿ, ಚಿರತೆ ಮತ್ತು ಕರಡಿ ಮತ್ತಿತರ ವನ್ಯ ಜೀವಿಗಳನ್ನು ಸೆರೆ ಹಿಡಿಯಲು ಸುಸಜ್ಜಿತ ಉಪಕರಣಗಳನ್ನು ಒಳಗೊಂಡ ಕೇಂದ್ರ ಸ್ಥಾಪನೆ ಸೇರಿದಂತೆ 1803.07 ಲಕ್ಷ ರೂಗಳ ವಿವಿಧ ಅಭಿವೃದ್ಧಿ ಕ್ರಿಯಾ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯ ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿಯು ಅನುಮೋದನೆ ನೀಡಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿಯ ಸಭೆಯಲ್ಲಿ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಮುಖ್ಯ,ಉಪ ಖನಿಜಗಳ ಗುತ್ತಿಗೆಗಳಿಂದ 7.21 ಕೋಟಿರೂಗಳ ಡಿಎಂಎಫ್ ನಿಧಿ ಸಂಗ್ರಹವಾಗಿದ್ದು 18.03 ಕೋಟಿ ರೂಗಳಿಗೆ ಕ್ರಿಯಾ ಯೋಜನೆಗೆ ಪ್ರಸ್ತಾವನೆ ಬಂದಿದೆ ಎಂದು ಸಮಿತಿಯ ಸಂಚಾಲಕರು ಸಭೆಗೆ ತಿಳಿಸಿದರು.
ಇತ್ತೀಚೆಗೆ ತುಮಕೂರು ನಗರದಲ್ಲಿ ಚಿರತೆ, ಶಿರಾದಲ್ಲಿ ಕರಡಿ ಹೀಗೆ ವನ್ಯ ಜೀವಿಗಳು ಜಿಲ್ಲೆಯ ನಗರ ಪ್ರದೇಶಗಳಿಗೆ ಬರುತ್ತಿದ್ದು, ಇವುಗಳನ್ನು ಹಾಸನದಿಂದ ತಂಡವನ್ನು ಕರೆತಂದು ಸೆರೆ ಹಿಡಿಯಲು ವಿಳಂಬವಾಗುತ್ತದೆ. ಆದುದರಿಂದ ತುಮಕೂರು ನಗರದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲು ಅಗತ್ಯವಿರುವ ವಾಹನ, ಡ್ರೋಣ್ ಸೇರಿದಂತೆ ಉಪಕರಣಗಳನ್ನುಖರೀದಿಸಲು 39 ಲಕ್ಷರೂಗಳ ಅಗತ್ಯವಿದೆ ಎಂದು ಡಿಸಿಎಫ್ ಸಭೆಯಲ್ಲಿ ಕ್ರಿಯಾ ಯೋಜನೆಯನ್ನು ಮಂಡಿಸಿದರು.
ಗಣಿಗಾರಿಕೆಯಿಂದ ಬಾಧಿತವಾಗಿರುವ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯವನ್ನು ಕೈಗೊಳ್ಳಲು ಯಾವುದೇ ರೀತಿಯಲ್ಲಿ ತೊಂದರೆಯಿಲ್ಲ, ಗಣಿಬಾಧಿತ ಪ್ರದೇಶವಾದ ಹಾಲ್ದೋಡೆಯಲ್ಲಿ ಎಎನ್‍ಎಮ್ ಆರೋಗ್ಯ ಕೇಂದ್ರವಿದೆ. ಆದರೆ ಎ.ಎನ್.ಎಮ್ ಒಬ್ಬರನ್ನು ಖಾಯಂ ಆಗಿ ನಿಯೋಜಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಡಿಹೆಚ್‍ಒ ಅವರಿಗೆ ಸೂಚಿಸಿದರು.
ವಿಸ್ತರಣಾ ಘಟಕ ಕಾರ್ಯಕ್ರಮದಡಿ ವೈದ್ಯರನ್ನು ನೇಮಿಸಿ ಆಭಾಗದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಿರುತ್ತವೆ ಇದಕ್ಕೆ ಅಗತ್ಯವಿರುವ ವೆಚ್ಚವನ್ನು ಡಿಎಂಎಫ್ ನಿಧಿಯಿಂದ ಭರಿಸಲಾಗುವುದು. ಕೈಗಾರಿಕಾ ಪ್ರದೇಶದ ಅಕ್ಕಪಕ್ಕದ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಕೈಗಾರಿಕೆಗಳಿಂದಲೂ ನೆರವು ಪಡೆಯಲು ಹಾಗೂ ಪರಿಸರಕ್ಕೆ ಧಕ್ಕೆಯಾಗದಂತೆ ನಿಯಂತ್ರಣವನ್ನು ಹೇರಬೇಕಾಗಿದೆ ಎಂದು ಅವರು ತಿಳಿಸಿದರು.
ಗಣಿಬಾಧಿತ ಪ್ರದೇಶಗಳಲ್ಲಿ ಬ್ಲಾಸ್ಟ್ ಮಾಡುವ ಬಗ್ಗೆ ಜನರಿಂದ ದೂರುಗಳು ಬರುತ್ತಿವೆ. ಇದನ್ನು ತಡೆಯಲು ಈ ಪ್ರದೇಶಗಳಲ್ಲಿ ಸಿಸ್ಮೋಮೀಟರ್ ಹಾಗೂ ದೂಳು ಮಾಪನ ಯಂತ್ರಗಳನ್ನು ಅಳವಡಿಸಿದರೆ ಸೂಕ್ತವಾಗಿರುತ್ತವೆ. ಇದರಿಂದ ಕಾನೂನು ಬಾಹಿರ ಬ್ಲಾಸ್ಟ್ ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಅವರು ತಿಳಿಸಿದರು.
ಬಗರ್‍ಹುಕುಂ ಅರ್ಜಿ ಸಲ್ಲಿಸಲು ಅವಕಾಶ: ಹಲವಾರು ವರ್ಷಗಳಿಂದ ಅನಧಿಕೃತವಾಗಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಮರು ಮಂಜೂರಾತಿ ನೀಡಲು ಹಾಗೂ ಅರ್ಜಿ ಸಲ್ಲಿಸಲು ಒಂದು ವರ್ಷದ ಕಾಲಾವಕಾಶ ನೀಡುವ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರುವ ಐತಿಹಾಸಿಕ ತೀರ್ಮಾನವನ್ನು ನಿನ್ನೆ ಸದನದಲ್ಲಿ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಕಾಯ್ದೆ ಇನ್ನು ಕೆಲವೇ ದಿನಗಳಲ್ಲಿ ರಾಜ್ಯಪಾಲರಿಂದ ಅನುಮೋದನೆಯಾಗಿ ಸರಕಾರದಿಂದ ಆದೇಶ ಹೊರಬರಲಿದೆ ಎಂದ ಅವರು, 2005ರವರೆಗೆ ಅನಧಿಕೃತ ಸಾಗುವಳಿ ಮಾಡಿದವರಿಗೆ ಮರು ಮಂಜೂರಾತಿ ನೀಡಲು ಹಾಗೂ ಅರ್ಜಿ ಸಲ್ಲಿಸಲು ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ ಎಂದರು.
ಶಿರಾ ಸೇರಿದಂತೆ ರಾಜ್ಯದ ವಿವಿಧೆಡೆ 40-50 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು,ಬೋಗಸ್ ಹಕ್ಕುಪತ್ರಗಳನ್ನು ನೀಡಲಾಗಿದೆ.ಈ ಜಮೀನಿನಲ್ಲಿ ತೆಂಗು,ಅಡಿಕೆ ಇದೆ. ಇಂತಹವರಿಗೆ ಮರು ಅರ್ಜಿಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಮುನಿಸಿಪಾಲಿಟಿ ಪ್ರದೇಶಗಳು ಹಾಗೂ ಕಂಟ್ರಿ ಟೌನ್ ಪ್ಲ್ಯಾನಿಂಗ್ ಆ್ಯಕ್ಟ್ ಜಾರಿ ಇದ್ದ ಕಡೆ ಭೂ ಪರಿವರ್ತನೆಗೆ ಹೆಚ್ಚು ತೊಂದರೆಯಾಗುತ್ತಿದ್ದು, ಡೀಮ್ಡ್ ಪರಿವರ್ತನೆ ಎಂಬ ಯೋಜನೆಯಡಿ ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಗೆ ಹಣ ಪಾವತಿ ಮಾಡಿ ಭೂ ಪರಿವರ್ತನೆ ಮಾಡಲು ಅವಕಾಶವಿದೆ. ಇದರಿಂದ ಜನರು ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ ಎಂದು ಅವರು ತಿಳಿಸಿದರು.
ಪರಿಸರ ಮಾಲಿನ್ಯಕ್ಕೆ ನಿಯಂತ್ರಣ: ತುಮಕೂರು ಜಿಲ್ಲೆಯ ಪರಿಸರ ಕಲುಷಿತವಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿದ್ದು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಹಲವು ನಿಯಂತ್ರಣಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ತಿಳಿಸಿದರು.
ತುಮಕೂರು ಸ್ಮಾರ್ಟ್‍ಸಿಟಿ ಎಂಬ ಹೆಗ್ಗಳಿಕೆ ಜೊತೆಗೆ ಕೈಗಾರಿಕೆಗಳು ವೇಗವಾಗಿ ಬೆಳೆಯುತ್ತಿವೆ ಈ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯದಲ್ಲಿ ಏರುಪೇರು ಉಂಟಾಗುತ್ತಿರಬಹುದು. ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.