×
Ad

ಮಹಾತ್ಮಾಗಾಂಧಿ ವಿಚಾರಧಾರೆಗಳು ಇಂದಿನ ಯುವಜನತೆಗೆ ಸ್ಫೂರ್ತಿದಾಯಕ: ಮೀರಾನಾಯಕ್

Update: 2018-02-24 22:30 IST

ಮೈಸೂರು,ಫೆ.24: ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮಾಗಾಂಧಿಯವರ ವಿಚಾರಧಾರೆಗಳು ಇಂದಿನ ಯುವಜನತೆಗೆ ಸ್ಫೂರ್ತಿದಾಯಕವಾಗಿವೆ ಎಂದು ಸಾಮಾಜಿಕ ಕಾರ್ಯಕರ್ತೆ ಮೀರಾ ನಾಯಕ್ ಅಭಿಪ್ರಾಯಪಟ್ಟರು.

ಅವರು ಶನಿವಾರ ಮಾನಸಗಂಗೋತ್ರಿಯ ಗಾಂಧಿ ಭವನ ಸಭಾಂಗಣದಲ್ಲಿ ಮೈಸೂರು ವಿ.ವಿ.ಗಾಂಧಿ ಕೇಂದ್ರದ ವತಿಯಿಂದ ಮಹಾತ್ಮಗಾಂಧಿಯವರ ವಿಚಾರಗಳಿಗೆ ಸಂಬಂಧಿಸಿದ ವಿಶೇಷ ಉಪನ್ಯಾಸಮಾಲೆ ಹಾಗೂ ಸಂವಾದ ಕಾರ್ಯಕ್ರಮವನ್ನು ಮಹಾತ್ಮಗಾಂಧಿಯವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಗಾಂಧೀಜಿಯವರ ಸ್ವಾತಂತ್ರ್ಯ ಪ್ರೇಮದಿಂದಾಗಿ ದೇಶವು ಬ್ರಿಟಿಷರ ಕಪಿ ಮುಷ್ಠಿಯಿಂದ ಸ್ವಾತಂತ್ರ್ಯ ಪಡೆಯಿತು. ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ಮಹಾತ್ಮಾಗಾಂಧಿ, ಸುಭಾಷ್‍ಚಂದ್ರಬೋಸ್, ಭಗತ್‍ಸಿಂಗ್ ಸೇರಿದಂತೆ ಹಲವಾರು ನಾಯಕರು ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ವಿಶೇಷವಾಗಿ ಗಾಂಧಿಯವರ ಅಹಿಂಸಾ ಚಳುವಳಿಗೆ ಬೆದರಿದ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡದ ಹೊರತು ಅನ್ಯಮಾರ್ಗವಿಲ್ಲವೆಂಬುದನ್ನು ಅರಿತು ಕೂಡಲೇ ಭಾರತಕ್ಕೆ ಸ್ವಾತಂತ್ರ್ಯ ನೀಡಿದರು ಎಂದರು.

ನಾನೂ ಕೂಡ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ದಿಸೆಯಲ್ಲಿ ಹೋರಾಟ ಮಾಡಿದವರಲ್ಲೊಬ್ಬರ ಮೊಮ್ಮಗಳಾಗಿದ್ದು ನಾನು ಪ್ರಾಥಮಿಕ ಶಾಲೆಯನ್ನು ಉ.ಕರ್ನಾಟಕದಲ್ಲಿ ಕಲಿಯುತ್ತಿದ್ದ ವೇಳೆ ಗಾಂಧೀಜಿಯವರ ಹೋರಾಟದ ಬಗ್ಗೆ ತಿಳಿದುಕೊಂಡಿದ್ದೆ. ನಾನು ಓದುತ್ತಿದ್ದ ಶಾಲೆಯಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಕಣ್ತಪ್ಪಿಸಿ ಅಲ್ಲಿ ನೆಲೆಸಿ ಸ್ವಾತಂತ್ರ್ಯ ಯೋಧರಿಗೆ ಉತ್ತೇಜನ ನೀಡುತ್ತಿದ್ದರು. ಈಗ ಆ ಶಾಲೆಯು ನವೀಕರಣಗೊಂಡಿರುವುದು ಸಂತಸದ ಸಂಗತಿ ಎಂದರು.

ಗಾಂಧೀಜಿಯವರು ಅನೇಕ ವಿಚಾರಧಾರೆಗಳನ್ನು ರಚಿಸಿದ್ದಾರೆ. ಅದರಲ್ಲಿ ಕೆಲವು ಇಂದಿನ ಯುವಜನತೆಗೆ ಸ್ಫೂರ್ತಿಯನ್ನು ತುಂಬುವಂತಹವುಗಳಾಗಿರುವುದರಿಂದ ಇಂತಹ ವಿಚಾರಧಾರೆಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಅವುಗಳಿಗೆ ತಕ್ಕಂತೆ ನಡೆದುಕೊಳ್ಳುವುದರ ಮೂಲಕ ಮಹಾತ್ಮಗಾಂಧಿಯವರನ್ನು ನೆನಪು ಮಾಡಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜವಾದಿ ಚಿಂತಕ ಪ.ಮಲ್ಲೇಶ್, ಮೈಸೂರು ವಿವಿ ಕುಲಸಚಿವೆ ಡಿ.ಭಾರತಿ, ಗಾಂಧಿ ಭವನ ನಿರ್ದೇಶಕ ಎಂ.ಎಸ್.ಶೇಖರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News