ಶ್ರೀರಂಗಪಟ್ಟಣ: ಕುಡಿಯುವ ನೀರು ಕಲುಷಿತ; ಪುರಸಭೆಗೆ ಮುತ್ತಿಗೆ
ಶ್ರೀರಂಗಪಟ್ಟಣ, ಫೆ.24: ಗಂಜಾಂನ ಚಂದಗಾಲು ಹೊಳೆಯಿಂದ ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ಕಲುಷಿತಗೊಳ್ಳುತ್ತಿದೆ ಎಂದು ಆರೋಪಿಸಿ ಶನಿವಾರ ನಾಗರಿಕರು ಪಟ್ಟಣದ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರೈಲ್ವೆ ನಿಲ್ದಾಣದ ವೃತ್ತದಲ್ಲಿ ಸಮಾವೇಶಗೊಂಡು ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಹೊರಟ ನಾಗರಿಕರು, ಪುರಸಭೆಗೆ ಮುತ್ತಿಗೆಹಾಕಿ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.
ಚಂದಗಾಲು ಹೊಳೆಯಿಂದ ಪೂರೈಕೆಯಾಗುವ ನೀರಿಗೆ ಮೈಸೂರಿನ ಕೆಸರೆಯ ಮೋರಿ ನೀರು ನಗುವನಹಳ್ಳಿ ಹಳ್ಳದ ಬಳಿ ಸೇರ್ಪಡೆಗೊಂಡು ನೀರು ಕಲುಷಿತವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪಾತ್ರೆಯಲ್ಲಿ ಶೇಖರಿಸಿದ ನೀರಿನ ತಳದಲ್ಲಿ ಕಲ್ಮಶ ಇರುತ್ತದೆ. ಹಲವು ಮಂದಿಗೆ ಜಾಂಡೀಸ್ ಮುಂತಾದ ಕಾಯಿಲೆ ಕಾಣಿಸಿಕೊಂಡಿವೆ. ಆದರೂ, ಪುರಸಭೆಯವರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಅವರು ದೂರಿದರು.ಸದರಿ ನೀರು ಕುಡಿಯಲು ಯೋಗ್ಯವಲ್ಲವೆಂದು ವೈದ್ಯರು ದೃಢಪಡಿಸಿದ್ದರೂ, ಶಾಸಕರು, ಬಹುತೇಕ ಪುರಸಭಾ ಸದಸ್ಯರು ಗಮನಕ್ಕೆ ಹಾಕಿಕೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಮೋರಿ ಮೂಲಕ ನೀರು ಶುದ್ಧೀಕರಣ ಕಾರ್ಯಾಗಾರಕ್ಕೆ ನೀರು ಸರಬರಾಜು ಸ್ಥಗಿತಗೊಳಿಸಿ, ಬೇರೆ ಮಾರ್ಗದಿಂದ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಪುರಸಭಾ ಸದಸ್ಯರಾದ ನಳಿನಿ, ಸತ್ಯನಾರಾಯಣ, ಪ್ರಕಾಶ್, ಸಾಯಿಕುಮಾರ್, ನಂದೀಶ್, ವೆಂಕಟೇಶ್, ರಾಜು, ಸಾಮಾಜಿಕ ಹೋರಾಟಗಾರ ಚಂದನ್, ಬಾಲು, ರಾಘವೇಂದ್ರ, ಇತರ ಮುಖಂಡರು ಪ್ರತಿಭಟನೆ ನೇತೃತ್ವವಹಿಸಿದ್ದರು.