ತುಮಕೂರು: 4 ಇಂದಿರಾ ಕ್ಯಾಂಟಿನ್‍ಗಳಿಗೆ ಉಸ್ತುವಾರಿ ಸಚಿವರಿಂದ ಚಾಲನೆ
ತುಮಕೂರು,ಫೆ.24: ಹಸಿವು ಮುಕ್ತ ಕರ್ನಾಟಕ ರಾಜ್ಯ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ತೆರೆಯುತ್ತಿರುವ ಇಂದಿರಾ ಕ್ಯಾಂಟೀನ್‍ಗೆ ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಚಾಲನೆ ನೀಡಿದರು.
ತುಮಕೂರು ನಗರದ ಮಹಾನಗರಪಾಲಿಕೆ ಆವರಣ, ಕ್ಯಾತ್ಸಂದ್ರ, ಶಿರಾಗೇಟ್ ಹಾಗೂ ಬಾಳನಕಟ್ಟೆಯಲ್ಲಿ ಈಗಾಗಲೇ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್‍ಗೆ ಏಕಕಾಲಕ್ಕೆ ಪಾಲಿಕೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ಉಪ್ಪಿಟ್ಟು, ಕೇಸರಿಬಾತು ಸವಿಯುವ ಮೂಲಕ ಸಚಿವರು ಕಡಿಮೆ ದರದಲ್ಲಿ ಬಡವರ ಹೊಟ್ಟೆ ಹಸಿವು ನೀಗಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.
ಈಗಾಗಲೇ ಶಿರಾ, ಮಧುಗಿರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿದ್ದು, ಜಿಲ್ಲಾ ಕೇಂದ್ರವಾದ ತುಮಕೂರಿನಲ್ಲಿ ಫೆಬ್ರವರಿ 25 ರಿಂದ ಸಾರ್ವಜನಿಕರಿಗೆ ಪ್ರತಿ ಪ್ಲೇಟ್‍ಗೆ 5 ರೂ ನಂತೆ ತಿಂಡಿ ಮತ್ತು 10 ರೂಗಳಿಗೆ ಮಧ್ಯಾಹ್ನ ಮತ್ತು ಸಂಜೆ ಊಟ ದೊರೆಯಲಿದೆ. ಶಿರಾಗೇಟ್‍ನ ಕಾಳಿದಾಸ ಸರ್ಕಲ್,ಕ್ಯಾತ್ಸಂದ್ರ ಹಾಗೂ ಬಾಳನಕಟ್ಟೆಯಲ್ಲಿ ನಿರ್ಮಿಸಿರುವ ಕ್ಯಾಂಟೀನ್‍ಗಳಿಗೆ ತುಮಕೂರು ಮಹಾನಗರಪಾಲಿಕೆ ಆವರಣದಲ್ಲಿ ತೆರೆದಿರುವ ಮುಖ್ಯ ಅಡುಗೆ ಮನೆಯಿಂದಲೇ ಅಡುಗೆ ತಯಾರಿಸಿ ಸರಬರಾಜು ಮಾಡಲಾಗುತ್ತದೆ.
ಈಗಾಗಲೇ ಮಧುಗಿರಿಯ ತಾಲೂಕು ಕೇಂದ್ರದಲ್ಲಿ ತೆರೆದಿರುವ ಇಂದಿರಾ ಕ್ಯಾಂಟಿನ್‍ನಲ್ಲಿ ನೀಡುತ್ತಿರುವ ಆಹಾರದ ಪ್ರಮಾಣ ಅತ್ಯಂತ ಕಡಿಮೆ ಇದ್ದು, ಸಾಕಾಗುವುದಿಲ್ಲ ಎಂಬ ದೂರುಗಳು ಕೇಳಿ ಬಂದಿದೆ. ಬಹುತೇಕ ಮಧ್ಯಮವರ್ಗದವರು, ಬಡವರು ಬಂದು ಸೇರುವ ಸ್ಥಳಗಳಲ್ಲಿ ಕ್ಯಾಂಟೀನ್ ತೆರೆದಿದ್ದು, ಹೇಗೆ ನಿಭಾಯಿಸುತ್ತಾರೆ ಎಂಬುವುದು ಕುತೂಹಲದ ಪ್ರಶ್ನೆಯಾಗಿದೆ.
ಇಂದಿರಾ ಕ್ಯಾಂಟಿನ್ ಉದ್ಘಾಟನೆಯ ವೇಳೆ ಶಾಸಕರಾದ ಡಾ.ರಫೀಕ್ ಅಹಮದ್,ಮೇಯರ್ ಎಚ್.ರವಿಕುಮಾರ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಮತ್ತಿತರರು ಉಪಸ್ಥಿತರಿದ್ದರು.