×
Ad

ತುಮಕೂರು: ದ್ವಿಚಕ್ರ ವಾಹನ ಕಳವು ಆರೋಪಿಗಳ ಬಂಧನ

Update: 2018-02-24 23:17 IST

ತುಮಕೂರು,ಫೆ.24:ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮನು ಸತ್ಯನ್, ಜಯಚಂದ್ರ ಕಪ್ಪೆ ಮತ್ತು ಮಹೇಶ್ ಬಂಧಿತ ಆರೋಪಿಗಳಾಗಿದ್ದು, ಕೆಎಸ್‍ಆರ್ ಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಮನು ಸತ್ಯನ್ ಬಸ್‍ನ ಹಿಂಬದಿಯ ಬಾಗಿಲಲ್ಲಿ ಅಂತಂತ್ರ ಸ್ಥಿತಿಯಲ್ಲಿ ನಿಂತಿದ್ದನ್ನು ಪ್ರಶ್ನಿಸಿದ ಕೆ.ಎಸ್.ಆರ್.ಟಿ.ಸಿ ಬಸ್‍ನ ಮಹಿಳಾ ನಿರ್ವಾಹಕಿ ಲೀಲಾವತಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಿನ್ನೆಲೆಯಲ್ಲಿ ಕೇಸು ದಾಖಲಿಸಿದ್ದರು. ಸದರಿ ದೂರಿನ ಹಿನ್ನೆಲೆಯಲ್ಲಿ ಮನು ಸತ್ಯನ್‍ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ನಗರದ ವಿವಿಧಡೆ ದ್ವಿಚಕ್ರ ವಾಹನ ಕಳವು ಮಾಡಿರುವ ವಿಷಯವನ್ನು ಬಾಯಿ ಬಿಟ್ಟಿದ್ದನು.

ವಿಚಾರಣೆ ವೇಳೆ ಆರೋಪಿ ಮನು ಸತ್ಯನ್ ಎಸ್‍ಎಸ್ ಪುರಂನ ಹೆಚ್‍ಕೆಬಿಎನ್ ಮೋಟಾರ್ಸ್ ಗ್ಯಾರೇಜ್  ಹತ್ತಿರ ಕೆ.ಎ.06.ವಿ.6678 ನಂಬರಿನ ಹಿರೋ ಹೊಂಡಾ ಪ್ಯಾಷನ್ ಪ್ಲಸ್ ಬೈಕನ್ನು ಮತ್ತು ಎಸ್‍ಎಸ್ ಪುರಂನ ಸುರುಬಿ ಪಿಜಿ ಹಾಸ್ಟಲ್ ಬಳಿ ಕೆಎ.08.ಜೆ.4830 ನಂಬರಿನ ಎಲ್‍ಎಂಎಲ್ ದ್ವಿಚಕ್ರ ವಾಹನವನ್ನು, ವಿಜಯ ಪದವಿ ಪೂರ್ವ ಕಾಲೇಜ್ ಬಳಿ ಒಂದು ಸುಝುಕಿ ಸಮುರಾಯಿ ದ್ವಿಚಕ್ರ ವಾಹನವನ್ನು ನಾನು ಮತ್ತು ನನ್ನ ಸ್ನೇಹಿತ ಅಂತರಸನಹಳ್ಳಿಯ ಜಯಚಂದ್ರ ಕಪ್ಪೆ ಸೇರಿ ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.

ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಮಧುಗಿರಿ ತಾಲೂಕು ಸೋಂಪುರ ಗ್ರಾಮದ ಮಲ್ಲೇಶ್ ಎಂಬುವರಿಗೆ ಮಾರಾಟ ಮಾಡಿದ್ದು, ಸುಜುಕಿ ಸಮುರಾಯಿ ದ್ವಿಚಕ್ರ ವಾಹನವನ್ನು ಯಲ್ಲಾಫುರ ಗ್ರಾಮದ ಶಿವರಾಜು ಎಂಬುವರಿಗೆ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆಯಲ್ಲಿ ತಿಳಿಸಿದ್ದಾನೆ. ಉಳಿದ ಆರೋಪಿಗಳಾದ ಜಯಚಂದ್ರ ಕಪ್ಪೆ ಮತ್ತು ಕಳವು ಬೈಕ್‍ಗಳನ್ನು ಸ್ವೀಕರಿಸಿದ್ದ ಮಹೇಶ ಎಂಬುವರನ್ನು ಪೊಲೀಸರು ಬಂಧಿಸಿ ಬಂಧಿತರಿಂದ ಕೆ.ಎ.06.ವಿ.6678 ನಂಬರಿನ ಹಿರೋ ಹೊಂಡಾ ಪ್ಯಾಷನ್ ಪ್ಲಸ್ ಮತ್ತು ಕೆಎ.08.ಜೆ.4830 ನಂಬರಿನ ಎಲ್‍ಎಂಎಲ್ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಯೋಗಾನಂದ ಸೋನಾರ್, ಮತ್ತು ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಉಮೇಶ್, ನಯಾಜ್ ಪಾಷಾ, ಶಾಂತಪ್ಪ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News