ದ್ವಿತೀಯ ಪಿಯುಸಿ ಪರೀಕ್ಷೆ: ಯಾವುದೇ ಅಕ್ರಮ ನಡೆಯದೆ ಸುಗಮ ಪರೀಕ್ಷೆಗೆ ಕ್ರಮ; ಡಾ.ಲೋಕೇಶ್

Update: 2018-02-24 17:55 GMT

ಶಿವಮೊಗ್ಗ,ಫೆ. 24: ಮಾರ್ಚ್ ಒಂದರಿಂದ 17ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಸುಗಮವಾಗಿ ನಡೆಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಅವರು ಶನಿವಾರ ಹಳೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಪಿಯು ಕಾಲೇಜು ಪ್ರಾಂಶುಪಾಲರು, ಮುಖ್ಯ ಅಧೀಕ್ಷಕರು, ತಹಶೀಲ್ದಾರ್ ಅವರ ಸಭೆಯಲ್ಲಿ ಈ ಕುರಿತು ನಿರ್ದೇಶನಗಳನ್ನು ನೀಡಿದರು. ಜಿಲ್ಲೆಯಲ್ಲಿ ಒಟ್ಟು 33 ಪರೀಕ್ಷಾ ಕೇಂದ್ರಗಳಿದ್ದು ಕಳೆದ ವರ್ಷ 32 ಕೇಂದ್ರಗಳಿದ್ದವು. ಈ ಬಾರಿ ಶಿವಮೊಗ್ಗ ತಾಲೂಕಿನಲ್ಲಿ ಹೆಚ್ಚುವರಿಯಾಗಿ ಒಂದು ಕೇಂದ್ರವನ್ನು ಆರಂಭಿಸಲಾಗಿದೆ. ಶಿವಮೊಗ್ಗ ತಾಲೂಕು 12, ಭದ್ರಾವತಿ 6, ತೀರ್ಥಹಳ್ಳಿ 3, ಹೊಸನಗರ 2, ಸಾಗರ 5, ಸೊರಬ 2 ಮತ್ತು ಶಿಕಾರಿಪುರ ತಾಲೂಕಿನಲ್ಲಿ 3 ಕೇಂದ್ರಗಳಿವೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 19187 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 8376 ಹುಡುಗರು, 10811 ಹುಡುಗಿಯರು ಇದ್ದಾರೆ. ಇವರಲ್ಲಿ ಹೊಸದಾಗಿ 15730 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 2372 ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. 1085 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಎದುರಿಸುತ್ತಿದ್ದಾರೆ ಎಂದು ಪಿಯು ಶಿಕ್ಷಣ ಉಪನಿರ್ದೇಶಕ ಗಂಗಾಧರಪ್ಪ ಅವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಸೂಚನೆ: ಪ್ರಶ್ನೆ ಪತ್ರಿಕೆ ಸಾಗಾಟದಿಂದ ಹಿಡಿದು ಪರೀಕ್ಷೆ ಆಯೋಜನೆವರೆಗೆ ಭದ್ರತೆಯಲ್ಲಿ ಯಾವುದೇ ಲೋಪ ಉಂಟಾಗಬಾರದು. ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ತೆಗೆಯುವುದು ಸೇರಿದಂತೆ ಪ್ರತಿಯೊಂದು ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ಮಾಡಬೇಕು. ಪ್ರಶ್ನೆ ಪತ್ರಿಕೆಗಳನ್ನು ತಹಶೀಲ್ದಾರ್ ನೇತೃತ್ವದ ತಂಡ ಕೊಂಡೊಯ್ಯಲಿದ್ದು, ಪ್ರತಿಯೊಂದು ವಾಹನಕ್ಕೂ ಜಿಪಿಎಸ್ ಅಳವಡಿಸಿರಬೇಕು. ಪರೀಕ್ಷಾ ಕೇಂದ್ರದ 200ಮೀಟರ್ ವ್ಯಾಪ್ತಿಯಲ್ಲಿ 144ಸೆಕ್ಷನ್ ಅಡಿ ನಿಷೇಧಾಜ್ಞೆಯನ್ನು ಪರೀಕ್ಷೆ ಸಂದರ್ಭದಲ್ಲಿ ಜಾರಿಗೊಳಿಸಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಪೊಲೀಸರು ಅನುಷ್ಟಾನಗೊಳಿಸಬೇಕು. ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿ ಬಿಟ್ಟರೆ ಬೇರೆ ಯಾರಿಗೂ ಪ್ರವೇಶಿಸಲು ಅವಕಾಶ ನೀಡಬಾರದು.

ಪರೀಕ್ಷಾ ಸಿಬ್ಬಂದಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಬೇಕು. ಕೊಠಡಿಯ ಒಳಗೆ ಮೊಬೈಲ್ ಸೇರಿದಂತೆ ಇಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯಲು ಪರೀಕ್ಷಾ ಮೇಲ್ವಿಚಾರಕರು ಸೇರಿದಂತೆ ಯಾರಿಗೂ ಅವಕಾಶವಿಲ್ಲ. ಫ್ಲೈಯಿಂಗ್ ಸ್ಕ್ವಾಡ್ ಬಂದರೂ ಅವರ ಗುರುತಿನ ಚೀಟಿ ನೀಡಿ ಒಳಗೆ ಪ್ರವೇಶಿಸಲು ಅವಕಾಶ ನೀಡಬೇಕು. ಪರೀಕ್ಷೆ ನಿರ್ವಹಣೆಯಲ್ಲಿ ಮುಖ್ಯ ಅಧೀಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಸಣ್ಣಪುಟ್ಟ ಲೋಪಗಳಿಗೂ ಅವಕಾಶ ನೀಡಬಾರದು. ಕರ್ತವ್ಯ ಲೋಪ ಉಂಟಾದರೆ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು.

ಜಿಲ್ಲೆಯಲ್ಲಿ ಸೂಕ್ಷ್ಮ ಅಥವಾ ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಯಾವುದೂ ಇರುವುದಿಲ್ಲ. ಪರೀಕ್ಷೆ ಬೆಳಿಗ್ಗೆ 10.15ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಕಳೆದ ವರ್ಷದಂತೆ ಪರೀಕ್ಷಾ ಕೇಂದ್ರಗಳ ವಿದ್ಯಾರ್ಥಿಗಳ ರ್ಯಾಂಡಮೈಸೇಶನ್ ಈಗಾಗಲೇ ಮಾಡಲಾಗಿದೆ. ಈ ವರ್ಷದಿಂದ ಜಾರಿಗೆ ಬಂದಿರುವಂತೆ ವಿದ್ಯಾರ್ಥಿಗಳ ರ್ಯಾಂಡಮೈಸೇಶನ್ ಆಗದೇ ಇರುವ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಮತ್ತು ಕೊಠಡಿ ಮೇಲ್ವಿಚಾರಕರನ್ನು ಸಹ ರ್ಯಾಂಡಮೈಸೇಶನ್ ಮಾಡಲಾಗಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಸೂಚನೆ: ಸುಗಮವಾಗಿ ಪರೀಕ್ಷೆ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಸಾಕಷ್ಟು ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತೆರಳಿ ತಮ್ಮ ಕೊಠಡಿಯನ್ನು ಗುರುತಿಸಿ ಕುಳಿತುಕೊಳ್ಳಬೇಕು. ಯಾವುದೇ ಗೊಂದಲಕ್ಕೆ ಒಳಗಾಗದೆ ನಿರ್ಭೀತಿಯಿಂದ ಪರೀಕ್ಷೆ ಎದುರಿಸುವಂತೆ ಜಿಲ್ಲಾಧಿಕಾರಿ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ನೀಡಿದರು. ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ತಹಶೀಲ್ದಾರ್‍ಗಳು, ಪ್ರಾಂಶುಪಾಲರು ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News