ಮಡಿಕೇರಿ: ಎರಡನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ

Update: 2018-02-24 18:07 GMT

ಮಡಿಕೇರಿ ಫೆ.24: ವೀರಾಜಪೇಟೆ ತಾಲೂಕಿನ ಹೆಬ್ಬಾಲೆ ದೇವರಪುರ ಗ್ರಾಮದಲ್ಲಿರುವ ಪರಿಶಿಷ್ಟ ಪಂಗಡದ ಸುಮಾರು 150 ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಹಾಡಿಯ ನಿವಾಸಿಗಳು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.   

ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಧರಣಿ ನಿರತರ ಅಹವಾಲುಗಳನ್ನು ಆಲಿಸಿದರು. ಶಾಶ್ವತ ಕುಡಿಯುವ ನೀರು ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡದ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲವೆಂದು ಸಮಿತಿಯ ಪ್ರಮುಖರು ತಿಳಿಸಿದರು. ಸುಮಾರು 150 ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುತ್ತಿದ್ದರೂ ಇಲ್ಲಿಯವರೆಗೆ ಸರಕಾರ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡಿಲ್ಲವೆಂದು  ಆರೋಪಿಸಿದರು.    

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಜಾಗದ ವಿವಾದ ನ್ಯಾಯಾಲಯದಲ್ಲಿರುವುದರಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಿಲ್ಲ. ಆದರೂ ಮಾನವೀಯ ದೃಷ್ಟಿಯಿಂದ ಕುಡಿಯುವ ನೀರನ್ನು ಟ್ಯಾಂಕರ್ ಗಳ ಮೂಲಕ ಭಾನುವಾರದಿಂದಲೇ ಪೂರೈಸುವುದಾಗಿ ಭರವಸೆ ನೀಡಿದರಲ್ಲದೆ, ಧರಣಿಯನ್ನು ಕೈಬಿಡುವಂತೆ ಸೂಚಿಸಿದರು. ಇದಕ್ಕೆ ಒಪ್ಪದ ಧರಣಿ ನಿರತರು, ಶಾಶ್ವತ ಕುಡಿಯುವ ನೀರಿನ ಜೊತೆಗೆ ತಾತ್ಕಾಲಿಕ ಶೌಚಾಲಯ ಹಾಗೂ ಸೋಲಾರ್ ಬೀದಿದೀಪ ಅಳವಡಿಸುವಂತೆ ಪಟ್ಟುಹಿಡಿದರು. ಇವುಗಳನ್ನು ಒದಗಿಸುವವರೆಗೆ ಆಹೋರಾತ್ರಿ ಧರಣಿ ಮುಂದುವರೆಸುವುದಾಗಿ ಹೇಳಿದರು. 

ಈ ಸಂದರ್ಭ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಪ್ರಮುಖರಾದ ಮುರುಗ, ಜಿಲ್ಲಾಡಳಿತ ಬಡವರ ಸಂಕಷ್ಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಬೇಕೆಂದರು. 

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ  ಹೆಚ್.ಆರ್.ಪರಶುರಾಮ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದಿದ್ದರೂ ಜಿಲ್ಲಾಡಳಿತಕ್ಕೆ ಕನಿಷ್ಠ ಕುಡಿಯುವ ನೀರನ್ನು ನೀಡಲು ಸಾಧ್ಯವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಬೇಡಿಕೆ ಈಡೇರುವವರೆಗೆ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ ಎಂದರು.

ವಿಭಾಗೀಯ ಸಂಚಾಲಕ  ಹೆಚ್.ಎಸ್.ಕೃಷ್ಣಪ್ಪ, ಸಂಘಟನಾ ಸಂಚಾಲಕರಾದ ಬಿ.ಆರ್.ರಜನಿಕಾಂತ್, ಪಿ.ಜೆ.ಸುಬ್ರಮಣಿ, ವೀರಾಜಪೇಟೆ ತಾಲೂಕು ಸಂಚಾಲಕ ಹೆಚ್.ಎಲ್.ಕುಮಾರ್, ಸಂಘಟನಾ ಸಂಚಾಲಕ  ಉಣ್ಣಿಕೃಷ್ಣ, ಪ್ರಮುಖರಾದ ಸತೀಶ್ ಸಿಂಗಿ, ಹೆಚ್.ಇ.ಶಿವಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಗೆ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ನೈತಿಕ ಬೆಂಬಲ ನೀಡಿದ್ದು, ಈ ಸಂದರ್ಭ ಜಿಲ್ಲಾ ಯುವ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ಶಾಫಿ ಕೊಟ್ಟಮುಡಿ, ಜಿಲ್ಲಾ ಉಪಾಧ್ಯಕ್ಷ ಶರ್ಫುದ್ದೀನ್, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಉಪಾಧ್ಯಕ್ಷ ಅಂದಾಯಿ ಮತ್ತು ಲಾಲಾ ಸ್ಟಾಲಿನ್, ಪ್ರಮಖರಾದ ಅಂಕಿತ್ ಪೊನ್ನಪ್ಪ, ರಫೀಕ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News