ಮಡಿಕೇರಿ: ಮಾತೃಪೂರ್ಣ ಯೋಜನೆ ಸದುಪಯೋಗ ಪಡಿಸಿಕೊಳ್ಳಿ; ಕಾವೇರಮ್ಮ ಸೋಮಣ್ಣ

Update: 2018-02-24 18:14 GMT

ಮಡಿಕೇರಿ ಫೆ.24: ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಟಿಕ ಆಹಾರ ಬಿಸಿ ಊಟ ನೀಡುವ ನಿಟ್ಟಿನಲ್ಲಿ ಮಾತೃಪೂರ್ಣ ಯೋಜನೆ ಜಾರಿಗೊಳಿಸಲಾಗಿದ್ದು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ಕರೆ ನೀಡಿದ್ದಾರೆ. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಸ್ತ್ರೀಶಕ್ತಿ ಭವನದಲ್ಲಿ ಇತ್ತೀಚೆಗೆ ‘ಮಾತೃಪೂರ್ಣ’ ಯೋಜನೆ ಸದುಪಯೋಗ ಕುರಿತು ನಡೆದ ‘ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿಯಲ್ಲಿ ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯದಲ್ಲಿನ ಪೌಷ್ಠಿಕಾಂಶದ ಸುಧಾರಣೆಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಅಡುಗೆ ತಯಾರಿಸಿ ಮಧ್ಯಾಹ್ನದ ಸಮಯದಲ್ಲಿ ಕೊಡಲ್ಪಡುವ ವೈಶಿಷ್ಠ ಪೂರ್ಣ ಯೋಜನೆಯಾಗಿದ್ದು, ಇದರ ಪ್ರಯೋಜನ ಅರ್ಹರಿಗೆ ತಲುಪುವಂತಾಗಬೇಕು ಎಂದರು. 

ಮಡಿಕೇರಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ಅವರು ಮಾತನಾಡಿ, ಮಾತೃಪೂರ್ಣ ಯೋಜನೆಯಡಿ ಮಧ್ಯಾಹ್ನದ ಒಂದು ಪೂರ್ಣ ಪೌಷ್ಠಿಕ ಬಿಸಿ ಊಟದಲ್ಲಿ ಅನ್ನ, ಸಾಂಬರ್, ಪಲ್ಯದ ಜೊತೆಗೆ ಬೇಯಿಸಿದ ಮೊಟ್ಟೆ ಮತ್ತು ಹಾಲು ಒಳಗೊಂಡಿದ್ದು, ತಿಂಗಳಿಗೆ 25 ದಿನಗಳಂತೆ, ವರ್ಷದಲ್ಲಿ ಒಟ್ಟು 300 ದಿನಗಳು ಪೌಷ್ಟಿಕ ಆಹಾರ ನೀಡಲಾಗುತ್ತದೆ. ಮೊಟ್ಟೆ ತಿನ್ನದವರಿಗೆ ಮೊಳಕೆ ಬರಿಸಿದ ಕಾಳು ಕೊಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. 

ಮಾತೃಪೂರ್ಣ ಯೋಜನೆಯಿಂದ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಒಂದು ದಿನಕ್ಕೆ ಬೇಕಾಗಿರುವ ಪ್ರೋಟೀನ್ ಕ್ಯಾಲರಿ ಮತ್ತು ಕ್ಯಾಲ್ಸಿಯಂ ಅಂಶಗಳು ಸುಮಾರು ಶೇ.40-45 ರಷ್ಟು ಈ ಒಂದು ಪೂರ್ಣ ಪೌಷ್ಠಿಕ ಬಿಸಿ ಊಟದಿಂದ ದೊರೆಯಲಿದೆ. ಮುಖ್ಯವಾಗಿ ಹೆರಿಗೆ ಸಮಯದಲ್ಲಿ ಗರ್ಭಿಣಿ ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣ ತಡೆಯುವುದು. ಜೊತೆಗೆ ಉತ್ತಮ ಆರೋಗ್ಯ ಬೆಳವಣಿಗೆ ಮೂಲಕ ರಕ್ತಹೀನತೆ ಕಡಿಮೆಗೊಳಿಸುವುದು ‘ಮಾತೃಪೂರ್ಣ’ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. 

ತಾಲೂಕು ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಮೇಲ್ವಿಚಾರಕರಾದ ಸುನಿತಾ ಅವರು ಮಾತನಾಡಿ ಗರ್ಭಿಣಿಯಾದ ನಂತರ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ನೋಂದಣಿ ಮತ್ತು ಪ್ರಸವ ಪೂರ್ವ ಆರೈಕೆ ಸೇವೆಗಳು, ಗರ್ಭಿಣಿ ಮತ್ತು ಬಾಣಂತಿಯರಿಗೆ ಅಗತ್ಯವಿರುವ ಎಲ್ಲಾ ಪೌಷ್ಠಿಕಾಂಶಗಳನ್ನೊಳಗೊಂಡ ಮಧ್ಯಾಹ್ನದ ಪೌಷ್ಠಿಕ ಊಟದ ಸೇವನೆ. ಕಬ್ಬಿಣಾಂಶದ ಮಾತ್ರೆಗಳನ್ನು ಮತ್ತು ಐಯೋಡಿನ್ ಯುಕ್ತ ಉಪ್ಪಿನ ಸೇವನೆಗೆ ಬೆಂಬಲ, ಗರ್ಭಿಣಿ ಮತ್ತು ಬಾಣಂತಿಯರ ಆರೈಕೆ ಹಾಗೂ ಪೌಷ್ಠಿಕಾಂಶ ಆಹಾರ ಸೇವನೆ ಮತ್ತು ನಿಯಮಿತ ಆರೋಗ್ಯ ತಪಾಸಣೆ ಹಾಗೂ ಆಪ್ತ ಸಮಾಲೋಚನೆ, ಗರ್ಭಿಣಿಯರ ಆರೋಗ್ಯ ಬೆಳವಣಿಗೆ ನಿರ್ವಹಣೆ ಮತ್ತು ಮಾಹಿತಿ ಸೇವೆಗಳು, ಗರ್ಭಿಣಿ ಮತ್ತು ಬಾಣಂತಿಯರಿಗೆ ನಿಗದಿಪಡಿಸಿರುವ ಪೌಷ್ಠಿಕಾಂಶದ ಆಹಾರ ಪ್ರಮಾಣ ಮತ್ತಿತರ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಮಾತೃಪೂರ್ಣ ಯೋಜನೆ ಸಹಕಾರಿಯಾಗಿದೆ ಎಂದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿದರು. ಅಂಗನವಾಡಿ ಮೇಲ್ವಿಚಾರಕರು ಇತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News