ಚಾಮರಾಜನಗರ: ನೂತನ ಓವರ್ ಹೆಡ್ ಟ್ಯಾಂಕ್ ಲೋಕಾರ್ಪಣೆ

Update: 2018-02-24 18:22 GMT

ಚಾಮರಾಜನಗರ,ಫೆ.24: ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ 18 ಲಕ್ಷ ರೂ.ವೆಚ್ಚದ 50 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕನ್ನು ಲೋಕಾರ್ಪಣೆಗೊಳಿಸಲಾಯಿತು.

ಗ್ರಾಮೀಣ ಕುಡಿಯುವ ನೀರು ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ನೂತನ ಟ್ಯಾಂಕನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ನದಿ ಮೂಲದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನೂ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶದ ಅಲ್ಲಲ್ಲಿ ಕುಡಿಯುವ ನೀರಿಗಾಗಿ ಓವರ್ ಹೆಡ್ ಟ್ಯಾಂಕ್‍ಗಳನ್ನು ನಿರ್ಮಿಸಲಾಗಿದ್ದು, ಬಹುತೇಕ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮವಹಿಸಲಾಗಿದೆ. ಅಲ್ಲಲ್ಲಿ ಕಿರುನೀರು ಸರಬರಾಜು ಯೋಜನೆಯಡಿ ತೊಂಬೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರಿನ ಘಟಕಗಳನ್ನು ತೆರೆಯುವ ಆಲೋಚನೆಯೂ ಇದ್ದು, ಅದು ಪ್ರಗತಿಯಲ್ಲಿದೆ ಎಂದರು.

ಅಲ್ಲದೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಒಂಬತ್ತೂವರೆ ವರ್ಷಗಳಿಂದ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನಗೆ ತೃಪ್ತಿಯಿದೆ. ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಚರಂಡಿಗಳ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಸರ್ಕಾರದಿಂದ ಬರುವ ಪ್ರತಿಯೊಂದು ಯೋಜನೆಯನ್ನೂ ಜನರಿಗೆ ತಲುಪಿಸುವ ಗುರುತರವಾದ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಿದ್ದೇನೆ ಎಂದರು.

ಇದೇ ವೇಳೆ ಚಂದಕವಾಡಿ ಮುಖ್ಯರಸ್ತೆಯಿಂದ ಬಸಪ್ಪನಪಾಳ್ಯ ಮಾರ್ಗವಾಗಿ ಸರಗೂರು ಮತ್ತು ಹುರುಳಿನಂಜನಪುರದವರೆಗೆ ನಬಾರ್ಡ್ ಯೋಜನೆಯಡಿಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು. ಜೊತೆಗೆ ಚಂದಕವಾಡಿ ಗ್ರಾಮದ ಅಲ್ಪಸಂಖ್ಯಾತ ಬಡಾವಣೆಗೆ 10 ಲಕ್ಷ ರೂ., ದಡದಹಳ್ಳಿ ಮತ್ತು ಅರಳಿಪುರ ಗ್ರಾಮಗಳ ಅಲ್ಪಸಂಖ್ಯಾತರ ಬಡಾವಣೆಗೂ 10 ಲಕ್ಷ ರೂ.ಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಆರ್.ಬಾಲರಾಜ್, ತಾಪಂ ಸದಸ್ಯೆ ಆಶಾ, ಗ್ರಾಪಂ ಅಧ್ಯಕ್ಷ ಮಹದೇವಮ್ಮ, ಉಪಾಧ್ಯಕ್ಷೆ ಯಶೋಧಮ್ಮ, ಚಂದ್ರಮ್ಮ, ಸಿದ್ದಪ್ಪಾಜಿ, ಹಾಪ್‍ಕಾಮ್ಸ್ ಉಪಾಧ್ಯಕ್ಷ ಸೋಮೇಶ್ವರ್, ಮುಖಂಡರಾದ ಸೋಮೇಶ್ವರ್, ರಮೇಶ್, ವೀರಭದ್ರಸ್ವಾಮಿ, ನಂಜುಂಡಸ್ವಾಮಿ, ಬಸಪ್ಪನಪಾಳ್ಯ ನಟರಾಜು, ನಾಗಯ್ಯ, ಸುಬ್ಬನಾಯಕ, ಮಹೇಶ್, ನಾಗರಾಜು, ಎಇಇ ಪುರುಷೋತ್ತಮ್, ಲಿಂಗರಾಜು, ಪ್ರಕಾಶ್, ಮರಿಸ್ವಾಮಿ, ಜೆಇ ಜಗದೀಶ್, ಪಿಡಿಒ ಚಂದ್ರು, ಗುತ್ತಿಗೆದಾರ ಮಹದೇವಪ್ಪ, ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News