ಗುಂಡ್ಲುಪೇಟೆ: ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮ

Update: 2018-02-24 18:25 GMT

ಗುಂಡ್ಲುಪೇಟೆ,ಫೆ.24: ಸಂವಿಧಾನದ ಆಶಯದಂತೆ ಸಮಾಜದ ದುರ್ಬಲರಾದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯದೊರಕುವಂತೆ ಮಾಡುವ ಉದ್ದೇಶದಿಂದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ ಪಿ.ದಿಡ್ಡಿ ಹೇಳಿದರು.

ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ವಿಶ್ವದಲ್ಲಿ ವರ್ಣ, ಜಾತಿ, ಧರ್ಮ, ಆರ್ಥಿಕ ಪರಿಸ್ಥಿತಿಗಳಾನುಸಾರ ನ್ಯಾಯದಾನವಾಗುತ್ತಿದ್ದು, ಇದನ್ನು ತಪ್ಪಿಸಿ ಎಲ್ಲಾ ಜನರನ್ನೂ ಸಮಾನವಾಗಿ ಪರಿಗಣಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಲು ಜಾಗತಿಕ ಮಟ್ಟದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ಪ್ರಧಾನ ಹಾಗೂ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಯೋಗೇಶ್ ಮಾತನಾಡಿ, ಸಮಾಜದಲ್ಲಿ ಎಲ್ಲಾ ಜನರೂ ಕಾನೂನಿನ ಮುಂದೆ ಸರಿಸಮಾನರಾಗಿದ್ದು ದುರ್ಬಲ ಹಾಗೂ ಆರ್ಥಿಕ ಚೈತನ್ಯವಿಲ್ಲದವರ ನೆರವಿಗೆ ಉಚಿತವಾದ ಕಾನೂನು ನೆರವು ನೀಡುವ ಸಲುವಾಗಿ ರಾಷ್ಟ್ರ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಾನೂನು ಸೇವಾ ಸಮಿತಿಗಳಿವೆ. ತಾಲೂಕು ಕಚೇರಿ, ಶಿಶು ಅಭಿವೃದ್ದಿ ಅಧಿಕಾರಿ ಹಾಗೂ ಬೇಗೂರಿನಲ್ಲಿ ಇವುಗಳ ಸದಸ್ಯರು ಉಚಿತ ಸಲಹೆ ಹಾಗೂ ಕಾನೂನು ನೆರವನ್ನು ನೀಡುತ್ತಿದ್ದಾರೆ. ಇವುಗಳು ಯಾವುದೇ ರೀತಿಯ ಸಂತ್ರಸ್ಥರಿಗೆ ನೆರವು ನೀಡಿ ಸೂಕ್ತ ಪರಿಹಾರ ಕೊಡಲು ಶ್ರಮಿಸುತ್ತವೆ ಎಂದರು.

ಅಪಘಾತ, ಆಕಸ್ಮಿಕ, ಅತ್ಯಾಚಾರ, ದೌರ್ಜನ್ಯಕ್ಕೊಳಗಾದ ಜನರು ಕಾನೂನು ಸೇವಾಸಮಿತಿಗೆ ಅರ್ಜಿ ಸಲ್ಲಿಸಿದರೆ ಅದನ್ನು ಪರಿಶೀಲಿಸಿ ಪರಿಹಾರ ನೀಡಲಾಗುತ್ತಿದ್ದು ಈ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲದಿರುವುದರಿಂದ ಇದಕ್ಕಾಗಿ ಮೀಸಲಿಟ್ಟ ನಿಧಿಯು ಬಳಕೆಗೆ ಬರುತ್ತಿಲ್ಲ. ಶೀಘ್ರನ್ಯಾಯದಾನಕ್ಕಾಗಿ ಜನತಾ ನ್ಯಾಯಾಲಯವಿದ್ದು, ರಾಜಿ ಸಂಧಾನದ ಮೂಲಕ ವ್ಯಾಜ್ಯಗಳ ಪರಿಹರಿಸುತ್ತಿದೆ. ಈ ಎಲ್ಲಾ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವ ಮೂಲಕ ಎಲ್ಲರಿಗೂ ನ್ಯಾಯ ದೊರಕುವಂತಾದಾಗ ಮಾತ್ರ ದಿನಾಚರಣೆ ಅರ್ಥಪೂರ್ಣವಾಗಲಿದೆ ಎಂದರು.

ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ಶರತ್ ಚಂದ್ರ ಮಾತನಾಡಿ, ಸಮಾಜದಲ್ಲಿ ಸಬಲರಿರುವವರೆಗೂ ದುರ್ಬಲರ ಮೇಲೆ ದೌರ್ಜನ್ಯ ನಡೆಯುತ್ತದೆ. ಆದ್ದರಿಂದ ಎಲ್ಲರೂ ಪರಸ್ಪರರನ್ನು ಗೌರವಿಸುವ ಮೂಲಕ ಸಮಾನತೆ ಕಾಣಬಹುದು. ವರ್ಷಕ್ಕೊಮ್ಮೆ ದಿನಾಚರಣೆ ಮಾಡುವ ಬದಲು ಪ್ರತಿದಿನವೂ ಆಚರಣೆ ಮಾಡಿದರೆ ಮಾತ್ರ ಸಾರ್ಥಕವಾಗಲಿದೆ ಎಂದರು.

ವಕೀಲ ರವಿಕಾಂತ್ ಮಾತನಾಡಿ, ಕರ್ನಾಟಕದಲ್ಲಿ 12 ನೇ ಶತಮಾನದಲ್ಲಿಯೇ ಬಸವಣ್ಣನವರ ಅನುಭವ ಮಂಟಪದಲ್ಲಿ ಲಿಂಗ, ಜಾತಿ, ಮತ ಬೇಧವಿಲ್ಲದೆ ಸರಿಸಮಾನವಾದ ಆಚರಣೆ ಜಾರಿಯಲ್ಲಿತ್ತು. ಮಹಿಳೆಯರ ಹಾಗೂ ದಲಿತರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರಗಳು ಕಾಯ್ದೆ ರೂಪಿಸಿದ ನಂತರ ಪ್ರಕರಣಗಳು ಇಳಿಮುಖವಾಗಿವೆ. ಈಗ ಕಾನೂನುಗಳ ಮೂಲಕ ಸಮಾನತೆ ಜಾರಿಗೊಳಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಬಿ.ನಂಜಪ್ಪ, ಕಾರ್ಯದರ್ಶಿ ವೆಂಕಟೇಶ್, ಬಿಪಿ.ಪುಟ್ಟಸ್ವಾಮಿ, ಈ.ಮಹದೇವಕುಮಾರ್, ಶಾಂತಮಲ್ಲಪ್ಪ, ಬೀರೇಗೌಡ, ನ್ಯಾಯಾಲಯದ ಸಿಬ್ಬಂದಿ ಉಮೇಶ್ ಸೇರಿದಂತೆ ಹಲವರು ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News