ಬೆವರಿಲ್ಲದೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ: ಅನಂತಕುಮಾರ್ ಹೆಗಡೆ

Update: 2018-02-26 12:00 GMT

ಮಡಿಕೇರಿ, ಫೆ.26: ಪ್ರಸ್ತುತ ದಿನಗಳಲ್ಲಿ ಪಡೆಯುವ ಶಿಕ್ಷಣವೇ ಬೇರೆ, ಬದುಕಿನ ಹಾದಿಯೇ ಬೇರೆ ಎಂಬಂತಹ ಪರಿಸ್ಥಿತಿಗಳಿದ್ದು, ಇಂತಹ ವಿಚಾರಗಳಿಂದ ಹೊರ ಬಂದು, ಆಯಾ ವ್ಯಕ್ತಿಯಲ್ಲಿ ಅಂತರ್ಗತವಾಗಿರುವ ಪ್ರತಿಭೆಗೆ ತಕ್ಕಂತೆ ಆತನ ಕೌಶಲ್ಯಗಳಿಗೆ ಒತ್ತು ನೀಡುವ ಸಲುವಾಗಿ ಸ್ಕಿಲ್ ಆನ್ ವೀಲ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಕೇಂದ್ರದ  ಕೌಶಾಲ್ಯಾಭಿವೃದ್ಧಿ ಖಾತೆಯ ಸಚಿವರಾದ ಅನಂತಕುಮಾರ್ ಹೆಗಡೆ ತಿಳಿಸಿದ್ದಾರೆ.

ನಗರದ ಕ್ರಿಸ್ಟಲ್ ಹಾಲ್‍ನಲ್ಲಿ ನಡೆದ ಕೌಶಲ್ಯಾಭಿವೃದ್ಧಿಯ ರಾಷ್ಟ್ರೀಯ ಯುವ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ಷಂಪ್ರತಿ 2 ಕೋಟಿ ಮಂದಿ ವಿವಿಧ ಶಿಕ್ಷಣಗಳನ್ನು ಪೂರೈಸಿ ಹೊರ ಬರುತ್ತಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ, ಅಗತ್ಯ ತರಬೇತಿಯನ್ನು ನೀಡುವುದು ತಮ್ಮ ಉದ್ದೇಶವಾಗಿದೆ ಎಂದರು.

ನಮ್ಮೆಲ್ಲರ ಕನಸುಗಳು ಹಿಮಾಲದಷ್ಟು ದೊಡ್ಡದಾಗಿರಬೇಕು. ಇಂತಹ ಉನ್ನತ ಗುರಿಯ ಸಾಧನೆಯೆಡೆಗೆ ಸಾಗುವ ಪ್ರಯತ್ನ ನಿಮ್ಮನ್ನು ಶಿಖರದ ತಪ್ಪಲಿಗಾದರು ಕೊಂಡೊಯ್ಯುತ್ತದೆಂದು ಪ್ರಸ್ತುತ ವಿದ್ಯಾರ್ಥಿಗಳು ತಾವು ಮುನ್ನಡೆಯಬೇಕಾದ ಕ್ಷೇತ್ರದ ಬಗ್ಗೆ ಹೊಂದಿರುವ ಅಪೇಕ್ಷೆ ಒಂದಾಗಿದ್ದರೆ, ಆಯ್ಕೆಮಾಡಿಕೊಂಡಿರುವ ಕ್ಷೇತ್ರವೇ ಬೇರೆಯಾಗಿರುತ್ತದೆ. ಇದರಿಂದ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿ ನಮ್ಮನ್ನು ಕಾಡಲಾರಂಭಿಸಿದೆ. ಇದನ್ನೇ ನಾವು ‘ಕೌಶಲ್ಯ’ದ ಅಂತರವೆಂದು ಕರೆಯುತ್ತೇವೆ. ಈ ಹಿನ್ನೆಲೆಯಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ, ಅರ್ಥೈಸಿಕೊಳ್ಳುವ ನಿಟ್ಟಿನ ಒಂದು ಪ್ರಯತ್ನವೆ ‘ಸ್ಕಿಲ್ ಆನ್ ವೀಲ್’ ಎಂದು ಸ್ಪಷ್ಟಪಡಿಸಿದರು.

ಹುಟ್ಟಿದ್ದೆ ಗೆಲ್ಲಲು ಮತ್ತು ಹುಟ್ಟಿದ್ದೆ ಆಳಲು ಎನ್ನುವ ನೆಪೋಲಿಯನ್ ಮಾತಿನಂತೆ, ಯುವ ಸಮೂಹ ತನ್ನಲ್ಲಿನ ಪ್ರತಿಭೆ ಮತ್ತು ಕೌಶಲ್ಯಗಳ ಮೂಲಕ ಸಾಧನೆಯ ಹಾದಿಯಲ್ಲಿ ಸಾಗಿದಲ್ಲಿ ಭಾರತ ವಿಶ್ವಕ್ಕೆ ಗುರುವಾಗಲಿದೆ ಎಂದು ಅನಂತ ಕುಮಾರ್ ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು. ನಮ್ಮೆಲ್ಲರ ಬದುಕು ‘ಲಾಟರಿ’ಯಂತೆ ಆಗದಿರಲಿ, ಬೆವರಿಲ್ಲದ ಬದುಕು ಬದುಕಲ್ಲ. ಬೆವರಿಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲವೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಯಾವುದೋ ಶಿಕ್ಷಣ ಹೊಂದಿ ಪಡೆಯುವ ಸರ್ಟಿಫಿಕೇಟ್‍ಗಳಿಂದಷ್ಟೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಬದುಕಿಗೆ ಪ್ರತಿಭೆ ಮತ್ತು ಕೌಶಲ್ಯ ಅತ್ಯವಶ್ಯ. ಈ ಹಿನ್ನೆಲೆಯಲ್ಲಿ  ಪ್ರತಿ ಜಿಲ್ಲೆಗೆ ಒಂದರಂತೆ ‘ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ’ಗಳನ್ನು ಸ್ಥಾಪಿಸಲಾಗುತ್ತಿದೆ. ಆ ಮೂಲಕ ಕೌಶಲ್ಯಾಭಿವೃದ್ಧಿಯ ಚಿಂತನೆಯನ್ನು ಪ್ರತಿ ಗ್ರಾಮ ಮಟ್ಟಕ್ಕೆ ಕೊಂಡೊಯ್ಯುವುದು ತಮ್ಮ ಚಿಂತನೆಯಾಗಿದೆ ಎಂದ ಸಚಿವರು, ಪ್ರತಿಯೊಬ್ಬರು ತಮ್ಮ ಪ್ರತಿಭೆ ಮತ್ತು ಕೌಶಲ್ಯಗಳಿಂದ ಇತರರಿಗೆ ಉದ್ಯೋಗ ನೀಡುವಂತಹವರಾಗಬೇಕು, ಕೇಳುವವರಾಗಬಾರದೆಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್‍ಸಿ ಸುನಿಲ್ ಸುಬ್ರಮಣಿ, ಜಿಪಂ ಅಧ್ಯಕ್ಷ ಬಿ.ಎ. ಹರೀಶ್ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಉಸ್ತುವಾರಿ ಹೊತ್ತ ವೆಂಕಟೇಶ್, ಶ್ರೀನಿವಾಸ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಪ್ರಶ್ನೆಗೆ ಹೆಗಡೆ ಕಟು ಉತ್ತರ 

ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದ ಸಂದರ್ಭ ವಿದ್ಯಾರ್ಥಿನಿಯೊಬ್ಬಳು ರಾಜಕೀಯದ ಕುರಿತಾದ ಹೇಳಿಕೆ ಸಂಬಂಧ ಪ್ರಶ್ನಿಸಿದಾಗ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ‘ಕನ್ನಡಕದ ಕಣ್ಣುಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ’ ಉತ್ತರಿಸಿ, ವಿದ್ಯಾರ್ಥಿ ಸಮೂಹವನ್ನು ಚಕಿತಗೊಳಿಸಿದರು. ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಸಂದರ್ಭ ಪ್ರಶ್ನೋತ್ತರ ಅವಧಿಯಲ್ಲಿ ವಿದ್ಯಾರ್ಥಿನಿಯೊಬ್ಬಳು, ಭಾಷಣದಲ್ಲಿ ರಾಜಕೀಯ ಇಲ್ಲವೆಂದು ಒತ್ತಿ ಹೇಳುವ ಮೂಲಕ ರಾಜಕೀಯ ತರುತ್ತಿದ್ದೀರಲ್ಲ ಎಂದು ಪ್ರಶ್ನಿಸಿದಳು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅನಂತ ಕುಮಾರ್ ಹೆಗಡೆ, ನಾನು ರಾಜಕೀಯ ಮಾತನಾಡಿಲ್ಲ. ಇಲ್ಲಿ ರಾಜಕಾರಣ ಮಾಡುವ ಅಗತ್ಯವೂ ಇಲ್ಲ. ಹಾಗೆ ಹೇಳುವವರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡುತ್ತೇನೆ ಎಂದರು.

ನಂತರ ಮುಂದುವರೆದ ಸಂವಾದದಲ್ಲಿ ರಾಜಕೀಯದ ಪದ ಪ್ರಯೋಗಿಸಿದ ಸಚಿವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಮಾಡದೇ ಇರುವುದನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News