ಯುವ ಸಮೂಹದ ಭವ್ಯ ಭವಿಷ್ಯದ ದಿಕ್ಕು ‘ಸ್ಕಿಲ್ ಆನ್ ವೀಲ್’: ಸಂಸದ ಪ್ರತಾಪ್ ಸಿಂಹ

Update: 2018-02-26 12:02 GMT

ಮಡಿಕೇರಿ ಫೆ.26: ಯುವ ಸಮೂಹದಲ್ಲಿ ಉದ್ಯಮ ಶೀಲತೆಯನ್ನು ಜಾಗೃತಿಗೊಳಿಸುವ ಸಲುವಾಗಿ ಪ್ರಧಾನಿ ಮೋದಿ ಅವರು ಭವ್ಯ ಭವಿಷ್ಯದ ದೃಷ್ಟಿಯಿಂದ ರೂಪಿಸಿರುವ ಕಾರ್ಯಕ್ರಮ ಕೌಶಲ್ಯಾಭಿವೃದ್ಧಿಯ ‘ಸ್ಕಿಲ್ ಆನ್ ವೀಲ್’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಡೆದ ಕೌಶಲ್ಯಾಭಿವೃದ್ಧಿಯ ‘ಸ್ಕಿಲ್ ಆನ್ ವೀಲ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅತ್ಯಂತ ಸಂಕಷ್ಟದ ದಿನಗಳನ್ನು ಹಾದು ಪ್ರಧಾನ ಮಂತ್ರಿಗಳಾದ ಮೋದಿ ಹಾಗೂ ಕಷ್ಟದ ಬದುಕಿನಿಂದ ಮೇಲೆದ್ದು ಬಂದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು

ಯುವ ಸಮೂಹದಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಕೌಶಲ್ಯಗಳಿಗೆ ಪೂರಕ ತರಬೇತಿಯನ್ನು ನೀಡುವ ಚಿಂತನೆಗಳಡಿ ಪ್ರಧಾನಿ ಮೋದಿ ಅವರು ಕೌಶಲ್ಯಾಭಿವೃದ್ಧಿ ಸಚಿವಾಲಯವನ್ನೆ ಆರಂಭಿಸಿದ್ದಾರೆ.

ಸಚಿವಾಲಯದ ಮೂಲಕ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿ ಸ್ಟಾಂಡ್ ಅಪ್ ಯೋಜನೆಯಡಿ 10 ಲಕ್ಷದಿಂದ 1 ಕೋಟಿ ನೆರವನ್ನು, ಸ್ಟಾರ್ಟ್ ಅಪ್ ಯೋಜನೆಯಡಿ 50 ಕೋಟಿಯವರಗೆ ಹಣಕಾಸಿನ ನೆರವನ್ನು ಒದಗಿಸುತ್ತಿದೆಯೆಂದು ತಿಳಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಯುವ ಸಮೂಹದಲ್ಲಿನ ಪ್ರತಿಭೆ ದೇಶ ಕಟ್ಟುವ ಕೆಲಸಕ್ಕೆ ಬಳಕೆಯಾಗಬೇಕೆಂದು ಆಶಿಸಿ, ಸ್ವಾಭಿಮಾನಿ, ಸ್ವಾವಲಂಬನೆಯ ಬದುಕು ಎಲ್ಲರದ್ದಾಗಲಿ ಎಂದು ಹಾರೈಸಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಭವಿಷ್ಯದ ಚಿಂತನೆಗಳನ್ನು ವಿಕಾಸಗೊಳಿಸುವ ಕಾರ್ಯಕ್ರಮವಾಗಿದೆ. ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳುವಂತಾಗಬೇಕು. ಹಠ ಮತ್ತು ಛಲದಿಂದ ಭವಿಷ್ಯವನ್ನು ರೂಪಿಸಿಕೊಳ್ಳುವುದು ಅವಶ್ಯವೆಂದು ತಿಳಿಸಿ, ತಂದೆ ತಾಯಿಯ ಒತ್ತಡಕ್ಕೆ ಸಿಲುಕಿ ಅವರ ಇಚ್ಛೆಯ ವಿಚಾರಗಳಲ್ಲಿ ಮುಂದುವರಿಯುವುದಕ್ಕಿಂತ, ತಮ್ಮ ಇಚ್ಛೆಯಂತೆ ಬದುಕು ರೂಪಿಸಿಕೊಳ್ಳಬೇಕೆಂದರು.

ಎಂಎಲ್‍ಸಿ ಸುನಿಲ್ ಸುಬ್ರಮಣಿ ಮಾತನಾಡಿ, ಯುವ ಸಮೂಹ ಯಾವುದರಲ್ಲಿ ಅಭಿರುಚಿ ಇದೆಯೋ ಅದರಲ್ಲೆ ಮುಂದುವರಿಯಬೇಕೆಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News