ಕಾವೇರಿ ನಿರ್ವಹಣಾ ಮಂಡಳಿ ರಚನೆಯಿಂದ ರಾಜ್ಯಕ್ಕೆ ಅಪಾಯ: ಎಚ್.ಡಿ.ದೇವೇಗೌಡ
ಬೆಂಗಳೂರು, ಫೆ.26: ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ನಿರ್ವಹಣಾ ಮಂಡಳಿ ರಚಿಸುವ ವಿಚಾರವನ್ನು ಪ್ರಸ್ತಾಪಿಸಿದೆ. ಒಂದು ವೇಳೆ ಕೇಂದ್ರ ಸರಕಾರ ಈ ಮಂಡಳಿಯನ್ನು ರಚಿಸಿದರೆ ರಾಜ್ಯಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆತಂಕ ವ್ಯಕ್ತಪಡಿಸಿದರು.
ಸೋಮವಾರ ನಗರದ ಜೆ.ಪಿ.ಭವನ(ಜೆಡಿಎಸ್ ಕಚೇರಿ)ದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ಅಂತಿಮ ತೀರ್ಪು ಬಂದಾಗ ವಿಧಾನಸಭಾ ಅಧಿವೇಶನ ನಡೆಯುತ್ತಿತ್ತು. ಪಕ್ಷಭೇದ ಮರೆತು ಎಲ್ಲರೂ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಸುಧೀರ್ಘ ಹೋರಾಟಕ್ಕೆ ಫಲ ಸಿಕ್ಕಿದೆ ಅನ್ನೋ ಭಾವನೆ ಎಲ್ಲರಲ್ಲಿದೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನ್ಯಾಯಾಧೀಕರಣ ನೀಡಿದ ತೀರ್ಪನ್ನು ಪ್ರಶ್ನೆ ಮಾಡಿದೆವು. ಹಿರಿಯ ವಕೀಲರನ್ನ ನಾನೇ ಭೇಟಿ ಮಾಡಿ ಚರ್ಚೆ ನಡೆಸಿದೆ. ಆಗ ರಾಜ್ಯದ ಪರ ವಕೀಲ ಫಾಲಿ ಎಸ್.ನಾರಿಮನ್ ಕೋಪ ಮಾಡಿಕೊಂಡಿದ್ದರು. ಆದರೂ, ಪರವಾಗಿಲ್ಲ, ರಾಜ್ಯಕ್ಕೆ ಆಗಿರೋ ಅನ್ಯಾಯದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡೋದಕ್ಕೆ ಒಪ್ಪಿಸಿದೆ ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರಮೋದಿ ಮೊನ್ನೆ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿನ ಎಲ್ಲ ಪಕ್ಷಗಳು ಸುಪ್ರೀಂಕೋರ್ಟ್ ತೀರ್ಪು ಪ್ರಶ್ನೆ ಮಾಡೋದಕ್ಕೆ ಒತ್ತಡ ಹಾಕುತ್ತಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಸುಪ್ರೀಂಕೋರ್ಟ್ ಆರು ವಾರಗಳ ಕಾಲಾವಕಾಶ ನೀಡಿದೆ. ಆದರೂ ನಿರ್ವಹಣಾ ಮಂಡಳಿ ರಚನೆಗೆ ತಮಿಳುನಾಡು ಒತ್ತಾಯಿಸುತ್ತಿದೆ ಎಂದು ಅವರು ಹೇಳಿದರು.
ಆದರೆ, ಮಂಡಳಿ ರಚನೆಯಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ನಮ್ಮ ರಾಜ್ಯದ ಕಡೆಯಿಂದ ಆಗಿಲ್ಲ. ಸರಕಾರ ಕಾನೂನು ತಜ್ಞರ ಜೊತೆ ಚರ್ಚೆ ಮಾಡಬೇಕಿತ್ತು. ಸಂಸತ್ತಿನಲ್ಲಿ ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ಕೇಂದ್ರ ಸಚಿವ ಅನಂತ್‌ಕುಮಾರ್‌ಗೆ ಸಹಕರಿಸುವಂತೆ ಕೇಳಿದ್ದೆ. ತಮ್ಮ ಪಕ್ಷದವರ ಜತೆ ಮಾತನಾಡಿ ನಾಳೆ ಹೇಳುತ್ತೇನೆ ಎಂದರು. ಆದರೆ, ನಾಳೆ ಬರಲೇ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಎರಡು ಪಕ್ಷದವರಿಗೆ ಇದು ಬೇಕಿಲ್ಲ. ನೀರು ಸರಬರಾಜು ನಿಂತಾಗ ಬೆಂಗಳೂರಿನ ಜನರಿಗೆ ದೇವೇಗೌಡರ ಹೋರಾಟದ ಬಗ್ಗೆ ತಿಳಿಯುತ್ತದೆ. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ನದಿ ತಿರುವು ಮಾಡುವಂತಿಲ್ಲ ಅಂತ ಹೇಳಿದೆ. ಹೀಗಿರುವಾಗ ಹೇಗೆ ನೀರು ಕೊಡುತ್ತೀರಾ? ಎಂದು ದೇವೇಗೌಡ ಪ್ರಶ್ನಿಸಿದರು.
ಎರಡು ರಾಷ್ಟ್ರೀಯ ಪಕ್ಷಗಳಿಗೆ ನೀರಾವರಿ ಹೆಚ್ಚಿಸುವ ಆಸಕ್ತಿ ಇಲ್ಲ. ಮೊದಲು ತಮಿಳುನಾಡು, ನಮ್ಮ ಬೆಳೆಗಳಿಗೆ ನೀರಿಲ್ಲ ನೀರು ಬಿಡಿಸಿ ಅಂತ ಕೇಳಿದರು. ಅದಕ್ಕೆ ನಾರಿಮನ್, ನಮಗೆ ಕುಡಿಯೋದಕ್ಕೆ ನೀರಿಲ್ಲ. ನೀರು ಬಿಡಿ ಅಂದರೆ ಹೇಗೆ ಅಂತಹ ಪ್ರಶ್ನೆ ಮಾಡಿದರು. ನ್ಯಾಯಾಧೀಕರಣದಲ್ಲಿ ಆಗಿದ್ದ ಅನ್ಯಾಯದ ಬಗ್ಗೆ ಮಾತನಾಡೋದಕ್ಕೆ ಹೋದರೆ ಒಪ್ಪುತ್ತಿರಲಿಲ್ಲ ಎಂದು ಅವರು ಹೇಳಿದರು.
ರಾಜ್ಯಕ್ಕೆ ಸಿಗಬೇಕಾಗಿರುವ ನೀರು ಸಿಕ್ಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇ ಕಾವೇರಿ ಕಣಿವೆಯಿಂದ ಬಂದವರು. ನವ ಕರ್ನಾಟಕ, ಹಸಿವು ಮುಕ್ತ ಕರ್ನಾಟಕ ಅನ್ನೋರು ಈ ಕಡೆ ಸ್ವಲ್ಪ ನೋಡಲಿ. ಅವರು 10 ಪರ್ಸೆಂಟ್ ಅಂತೆ, ಇವರು 90 ಪರ್ಸೆಂಟ್ ಅಂತೆ. ಕೇವಲ ಇಂತಹ ಹೇಳಿಕೆಗಳನ್ನು ನೀಡುತ್ತಾ ಕೂತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ರಾಜ್ಯ ಸರಕಾರದ ಸಿದ್ಧತೆ ಏನು. ಸದ್ಯದ ತೀರ್ಪಿನ ಬಗ್ಗೆ ಸಂಭ್ರಮಿಸಿದರೆ ಆಗುವುದಿಲ್ಲ. ಸರಕಾರ ಸಿದ್ಧತೆ ಮಾಡಿಕೊಳ್ಳಬೇಕು. ಜನ ಯೋಚನೆ ಮಾಡಬೇಕು. 14 ಟಿಎಂಸಿ ನೀರು ಸಿಕ್ಕಿತು ಎಂದು ಖುಷಿ ಪಡೋದಲ್ಲ, ನಮಗೆ 40 ಟಿಎಂಸಿ ನೀರು ಸಿಗಬೇಕಿತ್ತು. ಯಾವುದೇ ಕಾರಣಕ್ಕೂ ನಿರ್ವಹಣಾ ಮಂಡಳಿ ರಚನೆಯಾಗಬಾರದು ಎಂದು ದೇವೇಗೌಡ ಹೇಳಿದರು.
ಮಹಿಳಾ ಮೀಸಲಾತಿಗೆ ಮನವಿ
ಮಹಿಳಾ ಮೀಸಲು ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸುವಂತೆ ಪ್ರಧಾನಿ ನರೇಂದ್ರಮೋದಿಗೆ ಪತ್ರ ಬರೆದು ಒತ್ತಾಯಿಸಿರುವ ಎಚ್.ಡಿ.ದೇವೇಗೌಡ, 1996ರಲ್ಲಿ ಈ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿತ್ತು. 2010ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತ್ತು. ಆದರೆ, 21 ವರ್ಷವಾದರೂ ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರವಾಗಿಲ್ಲ. ಮುಂದಿನ ಅಧಿವೇಶನದಲ್ಲಾದರೂ ಈ ಮಸೂದೆ ಅಂಗೀಕರಿಸಿ ಎಂದು ಮನವಿ ಮಾಡಿದ್ದಾರೆ.