ಬಿಎಸ್‌ವೈ ಹೊರತು ಬೇರೆ ಸಂಸದರಿಗೆ ಟಿಕೆಟ್ ಇಲ್ಲ: ಸಂಸದ ಶ್ರೀರಾಮುಲು
ಕೊಪ್ಪಳ, ಫೆ. 26: ಲೋಕಸಭಾ ಸದಸ್ಯರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಉಳಿದ ಸಂಸದರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆಂದು ಸಂಸದ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಆನಂದ್ ಸಿಂಗ್‌ಗೆ ಬಿಜೆಪಿ ಎಲ್ಲ ಅನುಕೂಲ ಮಾಡಿತು. ಅವರ ಪಾಪದ ಕೊಡ ತುಂಬಿದೆ. ದುರಹಂಕಾರ ಹೆಚ್ಚಾಗಿ ಕಾಂಗ್ರೆಸ್ ಸೇರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಧಿಕಾರದ ಮದ ಹೆಚ್ಚಾಗಿದೆ. ಅವರಿಗೆ ರಾಜ್ಯದಲ್ಲಿನ ಅಹಿಂದ ವರ್ಗದ ನೋವು ಕಾಣುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿದ್ದಾರೆ ಎಂದು ಟೀಕಿಸಿದರು.
‘ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮುಂದಿನ ಚುನಾವಣೆಗೆ ಸರ್ಧಿಸುವುದಿಲ್ಲ. ಈ ಬಗ್ಗೆ ಅವರೇ ಸ್ಪಷ್ಟಣೆ ನೀಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಲಿದ್ದಾರೆ. ಹೀಗಾಗಿ ಆನೆಗೊಂದಿ ಹಾಗೂ ಚಿತ್ರದುರ್ಗ ಜಿಲ್ಲೆ ಗಡಿಭಾಗದಲ್ಲಿ ವಾಸ್ತವ್ಯಕ್ಕೆ ಮನೆ ಹುಡುಕುತ್ತಿದ್ದಾರೆ’
-ಶ್ರೀರಾಮುಲು ಸಂಸದ