×
Ad

ವಿದ್ವತ್ ಮೇಲೆ ನಲಪಾಡ್ ಹಲ್ಲೆ ಪ್ರಕರಣ: ಜಾಮೀನು ಅರ್ಜಿ ವಿಚಾರಣೆ ಫೆ.27ಕ್ಕೆ ಮುಂದೂಡಿಕೆ

Update: 2018-02-26 20:15 IST

ಬೆಂಗಳೂರು, ಫೆ.26: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಶಾಸಕ ಹಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಆತನ ಸಹಚರರು ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರಿನ 63ನೆ ಸೆಷನ್ಸ್ ಕೋರ್ಟ್ ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.

ಕಲಾಪ ಆರಂಭವಾಗುತ್ತಿದ್ದಂತೆ ಆಕ್ಷೇಪಣೆ ಸಲ್ಲಿಸಿದ ವಿಶೇಷ ಸರಕಾರಿ ವಕೀಲ ಶ್ಯಾಮ್ ಸುಂದರ್ 19 ಪುಟಗಳ ಆಕ್ಷೇಪಣೆ ಸಲ್ಲಿಸಿದರು.
ಸರಕಾರಿ ವಿಶೇಷ ವಕೀಲ ಶ್ಯಾಮ್ ಸುಂದರ್ ಸಲ್ಲಿಸಿದ ಆಕ್ಷೇಪಣೆಗಳ ವಿರುದ್ಧ ವಾದ ಮಂಡಿಸಿದ ಮೊಹಮ್ಮದ್ ನಲಪಾಡ್ ಪರ ವಕೀಲ ಟಾಮಿ ಸೆಬಾಸ್ಟಿಯನ್, ನಲಪಾಡ್ ವಿರುದ್ಧ ದಾಖಲಾಗಿರುವ ಕೇಸ್ ಸುಳ್ಳು ಪ್ರಕರಣವಾಗಿದೆ. ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ಘಟನೆ ನಡೆದ 48 ಗಂಟೆಗಳ ನಂತರ ಆರೋಪಿಗಳ ವಿರುದ್ಧ 307 ಸೆಕ್ಷನ್ ಅನ್ನು ಸೇರಿಸಲಾಗಿದೆ. ನಮ್ಮ ಕಕ್ಷಿದಾರರಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ.

ವಿದ್ವತ್ ಈಗಾಗಲೇ ಶೇ.90 ರಷ್ಟು ಚೇತರಿಸಿಕೊಂಡಿದ್ದಾನೆ. ಆದರೆ, ಸರಕಾರಿ ವಕೀಲರು ಆತ ಇನ್ನೂ ಗಂಭೀರವಾಗಿದ್ದಾನೆ ಎಂದು ಆಕ್ಷೇಪಣೆಯಲ್ಲಿ ಸಲ್ಲಿಸಿದ್ದಾರೆ. ಇದ್ದಕ್ಕಿದ್ದಂತೆ ನಡೆದ ಗಲಾಟೆಯಲ್ಲಿ ಹಲ್ಲೆ ನಡೆದಿದೆ. ಅಪಘಾತ ಮಾಡಿದವರೇ ಆಸ್ಪತ್ರೆಗೆ ಸೇರಿಸುವುದಿಲ್ಲವೇ, ಅದೇ ರೀತಿ ವಿದ್ವತ್‌ನನ್ನು ಆಸ್ಪತ್ರೆಗೆ ನಲಪಾಡ್ ಕಡೆಯವರೇ ಸೇರಿಸಿದ್ದಾರೆ. ಉದ್ದೇಶಪೂರ್ವಕವಾಗಿ ಮತ್ತು ಗೃಹ ಸಚಿವರ ಒತ್ತಡದ ಮೇಲೆ 307 ಸೆಕ್ಷನ್ ಸೇರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಾದ ಮಂಡಿಸಿದರು.

ನಲಪಾಡ್ ಹಾರಿಸ್ ಸಲ್ಲಿಸಿದ್ದ ವಿಚಾರಣೆ ವೇಳೆ ವಾದ ಮಂಡಿಸಿದ ವಿಶೇಷ ಸರಕಾರಿ ವಕೀಲ ಶ್ಯಾಮ್ ಸುಂದರ್, ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ನಿರ್ಭಯಾ ಪ್ರಕರಣದಂತೆ ಬರ್ಬರತೆ ಇದೆ ಎಂದು ವಾದ ಮಂಡಿಸಿದ್ದಾರೆ. ನಿರ್ಭಯಾ ಪ್ರಕರಣದಂತೆ ಈ ಕೇಸ್ ಕೂಡ ಕ್ಲಾಸಿಕಲ್ ಉದಾಹರಣೆ. ಇಡೀ ಸಮಾಜ ಈ ಕೇಸ್ ಅನ್ನು ಫಾಲೋ ಮಾಡುತ್ತಿದೆ. ಹೀಗಾಗಿ ಈ ಕೇಸ್ ಒಂದು ಆದರ್ಶವಾಗಬೇಕು. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು.

ವಿದ್ವತ್‌ನನ್ನು ಐಸಿಯೂನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ತನಿಖಾಧಿಕಾರಿಗಳು ಇನ್ನೂ ವಿದ್ವತ್‌ನಿಂದ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಫರ್ಜಿ ಕಫೆಯಲ್ಲಿನ ಸಿಸಿಟಿವಿ ದೃಶ್ಯಗಳಲ್ಲಿ ನಲಪಾಡ್ ಹಾರಿಸ್ ಇರುವುದು ಸೆರೆಯಾಗಿವೆ. ತನಿಖೆ ಆರಂಭವಾದ ನಂತರ ತನಿಖಾಧಿಕಾರಿಗಳು ಸೆಕ್ಷನ್ 307 ಅನ್ನು ಸೇರಿಸುವ ನಿರ್ಣಯಕ್ಕೆ ಬಂದಿದ್ದಾರೆ. ಘಟನೆಯ ತೀವ್ರತೆ ಅರಿತ ನಂತರ ಕೊಲೆ ಯತ್ನದ ಕೇಸ್ ದಾಖಲಿಸಲಾಗಿದೆ. ನಲಪಾಡ್ ಮತ್ತು ಆತನ ಸ್ನೇಹಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಬೆರಳಲ್ಲಿದ್ದ ಉಂಗುರಗಳನ್ನು ಮುಂದೆ ಮಾಡಿ ಮುಷ್ಟಿಯಿಂದ ವಿದ್ವತ್ ಮುಖದ ಮೇಲೆ ಹಲ್ಲೆ ನಡೆಸಿದ್ದಾರೆ. ಬಾಟೆಲ್‌ಗಳು ಮತ್ತು ಕೈಯ ಉಂಗುರಗಳಿಂದ ಹಲ್ಲೆ ಮಾಡಲಾಗಿದೆ. ಬೆರಳುಗಳ ಉಂಗುರಗಳನ್ನೇ ಅಸ್ತ್ರಗಳಂತೆ ಬಳಸಲಾಗಿದೆ. ಹಲ್ಲೆ ನಂತರವೂ ಕ್ಷಮೆ ಕೇಳುವಂತೆ ವಿದ್ವತ್‌ನನ್ನು ನಲಪಾಡ್ ಒತ್ತಾಯಿಸಿದ್ದಾನೆ.

ಲೈಫ್ ಆಫ್ ಪೈ ಸಿನಿಮಾದಲ್ಲಿ ನಾಯಕ ನಟ ಯಾವ ರೀತಿ ಊಟವಿಲ್ಲದೇ ಸಂಕಟ ಅನುಭವಿಸಿದ್ದಾನೋ ಅದೇ ರೀತಿ ವಿದ್ವತ್ ಕೂಡ ಸಂಕಟ ಅನುಭವಿಸಿದ್ದಾನೆ. ಇಷ್ಟು ದಿನವಿದ್ದ ವಿದ್ವತ್ ಮುಖವನ್ನು ಇನ್ನು ಮುಂದೆ ನೋಡಲು ಸಾಧ್ಯವಿಲ್ಲ. ವಿದ್ವತ್ ಪರಿಸ್ಥಿತಿ ನೋಡಿಕೊಂಡು ಆತನನ್ನು ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಆದರೆ ಇನ್ನೂ ಆರೋಗ್ಯದಲ್ಲಿ ಚೇತರಿಕೆಯಾಗಿಲ್ಲ ಎಂದು ಸರಕಾರಿ ವಿಶೇಷ ವಕೀಲ ಶ್ಯಾಂ ಸುಂದರ್ ವಾದ ಮಂಡಿಸಿದರು.
ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

ವಿದ್ವತ್ ಮಾತು ಅಸ್ಪಷ್ಟ?
ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಅವರಿಂದ ಗಂಭೀರ ಹಲ್ಲೆಗೊಳಗಾದ ಆರೋಪ ಪ್ರಕರಣ ಸಂಬಂಧ ಉದ್ಯಮಿ ಪುತ್ರ ವಿದ್ವತ್ ಆರೋಗ್ಯ ಇನ್ನು ಹೇಳಿಕೆ ನೀಡುವಷ್ಟು ಚೇತರಿಸಿಕೊಂಡಿಲ್ಲ, ಅವರ ಮಾತುಗಳು ಅಸ್ಪಷ್ಟವಾಗಿವೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಹಲ್ಲೆ ಆರೋಪ ಪ್ರಕರಣ ಸಂಬಂಧ ಸೋಮವಾರ ಮಧ್ಯಾಹ್ನ ಎಸ್‌ಐ ಅಶ್ವತ್‌ಗೌಡ ನೇತೃತ್ವದ ತಂಡ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್‌ನನ್ನು ಭೇಟಿಯಾಗಿ ಹೇಳಿಕೆ ಪಡೆಯಲು ತೆರಳಿದ್ದರು. ಆದರೆ, ಗಾಯಗಳ ನೋವಿನಿಂದ ಆತನಿಗೆ ಹೇಳಿಕೆ ನೀಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ವಿದ್ವತ್ ಮಾತುಗಳು ಅಸ್ಪಷ್ಟ ಹಿನ್ನೆಲೆಯಲ್ಲಿ ಹೇಳಿಕೆ ಪಡೆಯಲು ಪ್ರಯತ್ನಿಸಿ, ಕೆಲವು ಮೂಲ ಪ್ರಶ್ನೆಗಳಿಗೆ ಉತ್ತರ ಪಡೆದು ಅಧಿಕಾರಿಗಳು ವಾಪಸಾಗಿದ್ದಾರೆ. ಕೆಲ ದಿನಗಳ ಚಿಕಿತ್ಸೆ ನಂತರ ವಿದ್ವತ್‌ನಿಂದ ಪೂರ್ಣ ಪ್ರಮಾಣದ ಹೇಳಿಕೆ ಪಡೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News