ಸಾಗರ ಬಿಜೆಪಿ: ಬಿಎಸ್ ವೈ ಅಭಯ ಯಾರಿಗೆ ?
ಶಿವಮೊಗ್ಗ, ಫೆ. 26: 'ವಿಧಾನಸಭೆ ಚುನಾವಣೆಗೆ ಸಾಗರದಿಂದ ಹರತಾಳು ಹಾಲಪ್ಪರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಿರ್ಧಾರ ಮಾಡಲಾಗಿದೆ' ಎಂಬ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಯು ಮಾಜಿ ಸಚಿವ ಹರತಾಳು ಹಾಲಪ್ಪರಲ್ಲಿ ನೆಮ್ಮದಿಯ ಭಾವನೆ ಮೂಡಿಸಿದ್ದರೆ, ಮತ್ತೊಂದೆಡೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣಗೆ ಶಾಕ್ ನೀಡಿದೆ.
'ತಾನು ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ' ಎಂದು ಹಾಲಪ್ಪ ತಿಳಿಸಿದ್ದು, ಮತ್ತೊಂದೆಡೆ 'ನಾನೇ ಅಭ್ಯರ್ಥಿಯಾಗಲಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ' ಎಂದು ಬೇಳೂರು ಪುನರುಚ್ಚರಿಸಿದ್ದಾರೆ. ಈ ಮೂಲಕ ಸಾಗರ ಕ್ಷೇತ್ರದಲ್ಲಿ ಮತ್ತಷ್ಟು ಕುತೂಹಲ ಕೆರಳುವಂತೆ ಮಾಡಿದ್ದಾರೆ.
ಘೋಷಣೆ ಬಾಕಿಯಿದೆ: 'ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತನ್ನನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿಯಿದೆ' ಎಂದು ಹರತಾಳು ಹಾಲಪ್ಪ ತಿಳಿಸಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಹೊಸನಗರಕ್ಕೆ ಸೋಮವಾರ ಭೇಟಿಯಿತ್ತ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
'ವರಿಷ್ಠರ ಸೂಚನೆಯಂತೆ ಕಳೆದ ಒಂದು ಒಂದು ವರ್ಷದಿಂದಲೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿದ್ದೇನೆ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದಲ್ಲಿ ವರಿಷ್ಠರು ಅದನ್ನು ಬಗೆಹರಿಸಲಿದ್ದಾರೆ. ತಾನು ಪಕ್ಷದ ಸಿದ್ದಾಂತಗಳಿಗೆ ಬದ್ದನಾಗಿದ್ದು, ವರಿಷ್ಠರ ಆಜ್ಞೆಯಂತೆ ಮುನ್ನಡೆಯುವ ವ್ಯಕ್ತಿಯಾಗಿದ್ದೇನೆ' ಎಂದರು.
ಯಡಿಯೂರಪ್ಪ ಹುಟ್ಟು ಹಬ್ಬದ ಪ್ರಯುಕ್ತ ಫೆ. 27 ರಂದು ದಾವಣಗೆರೆಯಲ್ಲಿ ನಡೆಯಲಿರುವ ಬೃಹತ್ ರೈತ ಸಮಾವೇಶಕ್ಕೆ ಸಾಗರ ವಿಧಾನಸಭಾ ಕ್ಷೇತ್ರದಿಂದ 50 ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜನರ ಭಾವನೆಗಳನ್ನು ಅರಿತು, ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅವುಗಳಲ್ಲಿ ಭಾಗ್ಯಲಕ್ಷ್ಮಿ ಯೋಜನೆ, ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಮೊದಲಾದವುಗಳು ಇಂದಿಗೂ ಮನೆ ಮಾತಾಗಿವೆ ಎಂದು ಹೇಳಿದರು.
ನಾನೇ ಅಭ್ಯರ್ಥಿ: 'ನಾನೇ ಸಾಗರ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಈ ವಿಷಯದಲ್ಲಿ ಯಾವುದೇ ಅನುಮಾನ ಬೇಡ. ನಾನು ಬಿಜೆಪಿ ಅಭ್ಯರ್ಥಿಯಾಗುವ ವಿಷಯದಲ್ಲಿ ನೂರಕ್ಕೆ ನೂರರಷ್ಟು ನಂಬಿಕೆಯಿದೆ' ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ತನ್ನನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡದಂತೆ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ನನ್ನೊಂದಿಗೆ ಕುಳಿತು ಚರ್ಚಿಸುವುದಾಗಿಯೂ ತಿಳಿಸಿದ್ದಾರೆ. ಪಕ್ಷದ ತತ್ವ-ಸಿದ್ದಾಂತದಲ್ಲಿ ನನಗೆ ನಂಬಿಕೆಯಿದೆ. ಟಿಕೆಟ್ ನನಗೆ ಸಿಗುವ ವಿಶ್ವಾಸವೂ ಇದೆ. ಯಾವುದೇ ಸಂದರ್ಭದಲ್ಲಿಯೂ ಪಕ್ಷ ತ್ಯಜಿಸುವ ಪ್ರಶ್ನೆಯೇ ಇಲ್ಲ' ಎಂದು ತಿಳಿಸಿದ್ದಾರೆ.
ಸಮೀಕ್ಷೆ ನೋಡಿ ಟಿಕೆಟ್ ಕೊಡುವುದಾಗಿ ಪಕ್ಷದ ವರಿಷ್ಠರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ತನ್ನ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ. ರಾಜಕೀಯದಲ್ಲಿ ಷಡ್ಯಂತ್ರ ನಡೆಯುತ್ತದೆ. ಆದರೆ ನನಗೆ ಜನ ಬೆಂಬಲವಿದ್ದು, ಸಾಗರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ನಾನಾಗಿದ್ದೇನೆ ಎಂದು ಬೇಳೂರು ಪುನರುಚ್ಚರಿಸಿದ್ದಾರೆ.