ಅನಿವಾಸಿ ಭಾರತೀಯರಿಗೆ ಆರ್ಥಿಕ ನೆರವು: ಡಾ. ಆರತಿ ಕೃಷ್ಣ

Update: 2018-02-26 16:30 GMT

ಬೆಂಗಳೂರು, ಫೆ.26: 'ಸೌದಿ ಅರೇಬಿಯಾ ಸರಕಾರದ ಹೊಸ ನೀತಿಯನ್ವಯ ಆ ದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಲಕ್ಷಾಂತರ ವಿದೇಶಿಗರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ನಮ್ಮ ದೇಶದ ಸುಮಾರು 95 ಸಾವಿರ ಜನ ಈಗಾಗಲೇ ಉದ್ಯೋಗ ಕಳೆದುಕೊಂಡು ದೇಶಕ್ಕೆ ಹಿಂದಿರುಗಿದ್ದಾರೆ. ಇದರಲ್ಲಿ ನಮ್ಮ ರಾಜ್ಯದ ಸುಮಾರು 20 ಸಾವಿರ ಮಂದಿ ಇದ್ದಾರೆ ಎಂದು ಡಾ.ಆರತಿ ಕೃಷ್ಣ ಹೇಳಿದರು.

ಸೋಮವಾರ ವಿಕಾಸಸೌಧದಲ್ಲಿ ಸೌದಿ ಅರೇಬಿಯಾ ಹಾಗೂ ಇತರೆ ಕೊಲ್ಲಿ ರಾಷ್ಟ್ರಗಳ ಅನಿವಾಸಿ ಭಾರತೀಯ ಉದ್ಯಮಿಗಳೊಂದಿಗೆ ನಡೆಸಿದ ಸಮಾಲೋಚನಾ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಕೇರಳದಲ್ಲಿ ಈಗಾಗಲೆ ಅಳವಡಿಸಿಕೊಂಡಿರುವ ಅನಿವಾಸಿ ಭಾರತೀಯ ನೀತಿಯಡಿ, ಈ ರೀತಿ ಕೆಲಸ ಕಳೆದುಕೊಂಡು ಆ ರಾಜ್ಯಕ್ಕೆ ಹಿಂದಿರಿಗುವಂತಹ ವ್ಯಕ್ತಿಗಳಿಗೆ ಪುನರ್ವಸತಿ, ಉದ್ಯೋಗ ಸೃಷ್ಟಿ, ಉದ್ದಿಮೆ ಸ್ಥಾಪಿಸುವಂತಹವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವಂತಹದು ಸೇರಿ ಹತ್ತು ಹಲವು ಕಾರ್ಯಕ್ರಮವನ್ನ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂಬಂಧ ನಮ್ಮ ಸಮಿತಿ ಒಳಗೊಂಡಂತೆ ವಿಧಾನಸಭಾ ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿ ಕೇರಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಲಾಗಿದೆ. ಅದರ ಸಂಪೂರ್ಣ ವರದಿಯನ್ನು ರಾಜ್ಯ ಸರಕಾರಕ್ಕೆ ಈಗಾಗಲೇ ಮಂಡಿಸಲಾಗಿದೆ ಎಂದು ಆರತಿ ಕೃಷ್ಟ ಹೇಳಿದರು.

ಈ ಹಿನ್ನೆಲೆಯಲ್ಲಿ ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಕೆಲಸ ಕಳೆದುಕೊಂಡು ರಾಜ್ಯಕ್ಕೆ ಹಿಂದಿರುಗುವಂತಹವರಿಗೆ ನಮ್ಮ ಸರಕಾರ ಸ್ಪಂದಿಸುವ ನಿಟ್ಟಿನಲ್ಲಿ ಯಾವ ಯಾವ ಅನುಕೂಲಗಳನ್ನು ಮಾಡಬೇಕೆಂಬುದನ್ನು ತಿಳಿದುಕೊಳ್ಳಲು ಅಲ್ಲಿನ ಎಲ್ಲ ಕನ್ನಡಿಗರ ಸಂಘಟನೆಗಳೊಂದಿಗೆ ಇಂದು ನಡೆಸಿರುವ ಸಭೆಯಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಮಾರ್ಚ್‌ನಲ್ಲಿ ಶೈಕ್ಷಣಿಕ ವರ್ಷ ಅಂತ್ಯಗೊಂಡ ಬಳಿಕ ಸ್ವದೇಶಕ್ಕೆ ಹಿಂದಿರುಗಲು ಈಗಾಗಲೆ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಜನ ಸೌದಿ ಅರೇಬಿಯಾ ಸರಕಾರದ ಅನುಮತಿ ಪಡೆದುಕೊಂಡಿದ್ದಾರೆ. ಅರಬ್ ರಾಷ್ಟ್ರಗಳು, ಅದರಲ್ಲೂ ಪ್ರಮುಖವಾಗಿ ಸೌದಿ ಅರೇಬಿಯಾದಲ್ಲಿ ಜಾರಿಗೆ ತಂದಿರುವ ಹೊಸ ನೀತಿಯಿಂದಾಗಿ ಅನಿವಾಸಿ ಭಾರತೀಯರಿಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಭದ್ರತೆ ಉಂಟಾಗಿದೆ ಎಂದು ಆರತಿ ಕೃಷ್ಣ ಹೇಳಿದರು.

ಸೌದಿ ಅರೇಬಿಯಾ ಸೇರಿದಂತೆ ಇನ್ನಿತರ ಅರಬ್ ದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಪ್ರವಾಸ ಮಾಡಿ, ಅಲ್ಲಿರುವ ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಆಲಿಸಿದ್ದೇನೆ. ಅಲ್ಲದೆ, ಸುಮಾರು 120ಕ್ಕೂ ಹೆಚ್ಚು ಅನಿವಾಸಿ ಭಾರತೀಯ ಉದ್ಯಮಿಗಳೊಂದಿಗೆ ಸಭೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಉದ್ಯಮಿಗಳ ಮನವಿ ಸಲ್ಲಿಕೆ: ಭಾರತಕ್ಕೆ ಹಿಂದಿರುಗುವ ಅನಿವಾಸಿ ಭಾರತೀಯ ಉದ್ಯಮಿಗಳಿಗೆ ರಾಜ್ಯ ಸರಕಾರದಿಂದ ಬಡ್ಡಿ ರಹಿತ ಸಾಲ, ಕೈಗಾರಿಕೆ ಸ್ಥಾಪನೆಗೆ ಭೂಮಿ, ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರತಿ ಕೃಷ್ಣ ಹೇಳಿದರು.

ಪ್ರಮುಖವಾಗಿ ವಾಹನ ಚಾಲಕರು, ಮಹಿಳೆಯರ ಅಲಂಕಾರಿಕ ಉದ್ಯಮ, ಭದ್ರತಾ ಸಿಬ್ಬಂದಿ, ಸ್ವಾಗತಕಾರರು ಸೇರಿದಂತೆ ಒಟ್ಟು 12 ಉದ್ಯಮಗಳಿಗೆ ಸಮಸ್ಯೆ ಎದುರಾಗಲಿದೆ. ಇದರಿಂದಾಗಿ, ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಪ್ರಸಕ್ತ ಸಾಲಿನ ಸೆಪ್ಟಂಬರ್‌ವರೆಗೆ ಸೌದಿ ಅರೇಬಿಯಾ ಸರಕಾರವು ಗಡುವು ನೀಡಿದ್ದು, ಆ ವೇಳೆಗೆ ಲಕ್ಷಾಂತರ ಮಂದಿ ಹಿಂದಿರುಗಲಿದ್ದಾರೆ ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಅನಿವಾಸಿ ಭಾರತೀಯ ಕ್ಷೇಮಾಭಿವೃದ್ಧಿ ಅನುದಾನ ಮೀಸಲಿಡಲಾಗಿದೆ. ಈ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಅನಿವಾಸಿ ಭಾರತೀಯರಿಗೆ ಸ್ವ ಉದ್ಯೋಗ ಆರಂಭಿಸಲು ಆರ್ಥಿಕ ನೆರವು ಒದಗಿಸಲಾಗುವುದು ಎಂದು ಆರತಿ ಕೃಷ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News